ಬೆಂಗಳೂರು: ಕರ್ನಾಟಕ ರತ್ನ ಪುನೀತ್ ರಾಜಕುಮಾರ್ (Puneeth Rajkumar) 50ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿನ ಅಪ್ಪು ಸ್ಮಾರಕಕ್ಕೆ ಮಕ್ಕಳೊಂದಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ರಾಘಣ್ಣ ಕುಟುಂಬಸ್ಥರು ಹಾಗೂ ಪುತ್ರಿಯರೊಂದಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಆಗಮಿಸಿ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಅಪ್ಪನಿಗಾಗಿ ತಯಾರಿಸಿದ ಕೇಕ್ ನ್ನು ಅಪ್ಪು ಪುತ್ರಿಯರು ಸ್ಮಾರಕದ ಮುಂದೆ ಇರಿಸಿದ್ದಾರೆ. ತಂದೆ ಹುಟ್ಟು ಹಬ್ಬಕ್ಕೆ ಪುತ್ರಿಯರು ಶುಭ ಕೋರಿದ್ದಾರೆ.
ಅಪ್ಪು (Appu) ಹುಟ್ಟು ಹಬ್ಬದ (Birthday) ಹಿನ್ನೆಲೆಯಲ್ಲಿ ಸಮಾಧಿ ಬಳಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದಾರೆ. ಅಭಿಮಾನಿಗಳು ಕೂಡ ಅಪ್ಪು ಇಷ್ಟ ಪಡುವ ನೆಚ್ಚಿನ ತಿಂಡಿಗಳನ್ನು ಇಟ್ಟು ಪೂಜೆ ಸಲ್ಲಿಸಿದ್ದಾರೆ.
ಪುನೀತ್ ಹುಟ್ಟುಹಬ್ಬದ ಹಿನ್ನೆಲೆ ರೀ-ರಿಲೀಸ್ ಆದ ‘ಅಪ್ಪು’ ಚಿತ್ರ ನೋಡಲು ಪುತ್ರಿಯರೊಡನೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ನರ್ತಕಿ ಥಿಯೇಟರ್‌ಗೆ ಆಗಮಿಸಿ ಸಿನಿಮಾ ವೀಕ್ಷಿಸಿದ್ದರು. ಆದರೆ, ಪುತ್ರಿಯರು ಭಾವುಕರಾಗುತ್ತಿದ್ದಂತೆ 10 ನಿಮಿಷಕ್ಕೆ ಮರಳಿ ಹೊರ ಬಂದಿದ್ದರು. ಪುನೀತ್ ರಾಜ್ಕುಮಾರ್ ಅವರಿಗೆ ಇಂದು (ಮಾರ್ಚ್ 17) ಜನ್ಮದಿನ. ಅವರು ಬದುಕಿದ್ದರೆ ಕುಟುಂಬದ ಜೊತೆ 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ, ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಆದರೆ, ಇಂದಿಗೂ ಅವರು ಇಲ್ಲ ಎನ್ನುವುದನ್ನು ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.