ಇಂದು ಕನ್ನಡಿಗರ ಆರಾಧ್ಯದೈವ ಪುನೀತ್ ರಾಜ್ ಕುಮಾರ್ ಅವರ 50ನೇ ಜನ್ಮದಿನ. ಅಪ್ಪು ಜತೆಗಿಲ್ಲದಿದ್ದರೂ ಅವರ ಹುಟ್ಟುಹಬ್ಬವನ್ನು ಇಡೀ ಕರುನಾಡೇ ತನ್ನದೆಂಬಂತೆ ಆಚರಿಸುತ್ತಿದೆ. ಏಕೆಂದರೆ, “ಪುನೀತ್” ಎನ್ನುವುದು ಕರುನಾಡಿನ ಹೃದಯವೆಂಬ ಬೆಳ್ಳಿತೆರೆಯಲ್ಲಿ ಇಂದಿಗೂ ಬ್ಲಾಕ್ ಬಸ್ಟರ್ ಆಗಿ ಓಡುತ್ತಿರುವ ಚಿತ್ರ.
ಪುನೀತ್ ನಮ್ಮನ್ನಗಲಿ ವರ್ಷಗಳು ಉರುಳಿ ಹೋಗುತ್ತಿದ್ದರೂ, ಆ ಅನರ್ಘ್ಯ ರತ್ನದ ಮೌಲ್ಯ ಮಾತ್ರ ಕಡಿಮೆಯಾಗುವುದಿಲ್ಲ. ಇಂದಿಗೂ ರಾಜ್ಯದ ಹಿರಿಕಿರಿಯರಿಗೆ ಅಪ್ಪು ಸ್ಫೂರ್ತಿಯ ಸೆಲೆ. ಅಪ್ಪು ಎಂದರೆ ಸರಳತೆ, ಅಪ್ಪು ಅಂದರೆ ಪ್ರೀತಿ, ಅಪ್ಪು ಅಂದರೆ ನಿಷ್ಕಲ್ಮಶ ನಗು. ಯಾಕೆ, ಅಪ್ಪು ಎಂದರೆ ನಮ್ಮ ಜನರಿಗೆ ಯಾಕಿಷ್ಟು ಪ್ರೀತಿ? ಆ ಹೆಸರಲ್ಲೇನಿದೆ? ಯಾಕೆ ಇಂದಿಗೂ ಅವರನ್ನು ಕನ್ನಡಿಗರು ಆರಾಧಿಸುತ್ತಾರೆ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಪರಮಾತ್ಮನೊಳಗಿನ ಶಕ್ತಿ ಅನಾವರಣಗೊಳ್ಳುತ್ತಾ ಸಾಗುತ್ತದೆ.
ಹೌದು, ಯುವರತ್ನ, ರಾಜಕುಮಾರ, ಪರಮಾತ್ಮ, ರಣವಿಕ್ರಮ, ಅಪ್ಪುವಾಗಿ ಮನೆ-ಮನಗಳಲ್ಲಿ ನೆಲೆಸಿರುವ ಪುನೀತ್ ರಾಜ್ ಕುಮಾರ್ ಅವರು ಇಹಲೋಕ ತ್ಯಜಿಸಿ ಮೂರೂವರೆ ವರ್ಷಗಳು ಕಳೆದರೂ, ಅವರು ಇಂದಿಗೂ ನಮ್ಮ ನಿಮ್ಮ ನಡುವೆಯೇ ಇದ್ದಾರೇನೋ ಅನ್ನುವಷ್ಟು ಜೀವಂತಿಕೆಯನ್ನು ಉಳಿಸಿಹೋಗಿದ್ದಾರೆ. ರಾಜ್ಯದ ಯಾವುದೋ ಹಳ್ಳಿಯಿಂದ ನಗರದ ಗಲ್ಲಿಗಳವರೆಗೂ ಇಂದಿಗೂ ಅಪ್ಪು ಆವರಿಸಿಬಿಟ್ಟಿದ್ದಾರೆ. ಅಪ್ಪುವಿನ ನಗುಮುಖದ ಭಾವಚಿತ್ರಗಳನ್ನು ನೋಡದೇ ರಾಜ್ಯದ ಒಂದು ಊರನ್ನೂ ದಾಟುವುದು ಸಾಧ್ಯವಿಲ್ಲ. ಹೋಟೆಲ್ ಗಳು, ಅಂಗಡಿಗಳು, ತಳ್ಳುಗಾಡಿಗಳು, ಆಟೋ, ಕಾರು, ಬಸ್ಸುಗಳು… ಹೀಗೆ ಕಣ್ಣು ಹಾಯಿಸಿದಲ್ಲೆಲ್ಲ ಅಪ್ಪು ಕಾಣುತ್ತಾರೆ, ಅವರ ನಿಷ್ಕಲ್ಮಶ ನಗುಮುಖ ಎಂಥವರನ್ನೂ ಸೆಳೆಯುತ್ತದೆ.

ಹೌದು, ಕಲಾವಿದ ಸತ್ತರೂ ಕಲೆಗೆ ಸಾವಿಲ್ಲ ಎಂಬ ಮಾತಿದೆ. ಆದರೆ, ಪುನೀತ್ ಬರೀ ನಟನಾಗಿರಲಿಲ್ಲ. ಅವರೊಂದು ಶಕ್ತಿಯಾಗಿದ್ದರು. ಸರಳತೆಯ ಸಾಕಾರಮೂರ್ತಿಯಾಗಿದ್ದರು. ಮಗುವಿನ ನಗುವನ್ನು ಹೊತ್ತಿದ್ದ ಬಂಗಾರದ ಮನುಷ್ಯನಾಗಿದ್ದರು. ಶ್ರೀಮಂತಿಕೆ, ದೊಡ್ಡಸ್ತಿಕೆ, ಸೆಲೆಬ್ರಿಟಿಯೆಂಬ ಪದವಿಗಳಿಗಿಂತಲೂ ಸಭ್ಯತೆ, ವಿನಯತೆ, ಹೃದಯವಂತಿಕೆಯೇ ಮೇಲು ಎಂಬುದನ್ನು ತೋರಿಸಿಕೊಟ್ಟಿದ್ದರು. ಬಲಗೈಯ್ಯಲ್ಲಿ ಕೊಟ್ಟಿದ್ದು, ಎಡಗೈಗೆ ತಿಳಿಯಬಾರದು ಎಂಬಂತೆ ನೂರಾರು ಮಕ್ಕಳಿಗೆ ಶಿಕ್ಷಣ, ಅನಾಥರಿಗೆ ಆಶ್ರಯ ನೀಡಿ ಹಲವರಿಗೆ ಸ್ಫೂರ್ತಿಯಾಗಿದ್ದರು. ಅದೇ ಕಾರಣಕ್ಕೆ ಪುನೀತ್ ರಾಜ್ ಕುಮಾರ್ ಜನ್ಮದಿನವನ್ನು ರಾಜ್ಯವು ಸ್ಫೂರ್ತಿ ದಿನವಾಗಿ ಆಚರಿಸುತ್ತಿದೆ.
ಕನ್ನಡ ಚಿತ್ರರಂಗದ “ಭಾಗ್ಯವಂತ”:
ಪುನೀತ್ ರಾಜ್ ಕುಮಾರ್ ಅವರು 3 ತಿಂಗಳಿದ್ದಾಗಲೇ ಬೆಳ್ಳಿತೆರೆಗೆ ಕಾಲಿಟ್ಟವರು. ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ, ವಿದ್ಯಾವಂತರನ್ನಾಗಿಸಿ ಬೆಳೆಸಬೇಕೆಂದು ಡಾ.ರಾಜ್ ಕುಮಾರ್ ಅವರು ಕನಸು ಕಂಡಿದ್ದರು. ಆದರೆ, ಅಪ್ಪು ವಿಷಯದಲ್ಲಿ ಅದು ಅಪವಾದವಾಗಿತ್ತು. ಅಪ್ಪು ಮೇಲೆ ಅಪ್ಪನ ಅಭಿನಯದ ಪ್ರಭಾವವು ಎಷ್ಟು ಬೀರಿತ್ತೆಂದರೆ, ಕೇವಲ 3 ತಿಂಗಳ ಮಗುವಿದ್ದಾಗಲೇ ಅಪ್ಪು ಪ್ರೇಮದ ಕಾಣಿಕೆ ಚಿತ್ರದಲ್ಲಿ ಕಾಣಿಸಿಕೊಂಡರು. ಮಾರನೇ ವರ್ಷವೇ ಸನಾದಿ ಅಪ್ಪಣ್ಣ ಚಿತ್ರದಲ್ಲಿ ಹನುಮಂತುವಿನ ಪಾತ್ರ. ನಂತರದಲ್ಲಿ ತಾಯಿಗೆ ತಕ್ಕ ಮಗ, ವಸಂತಗೀತ, ಭೂಮಿಗೆ ಬಂದ ಭಗವಂತ, ಭಾಗ್ಯವಂತ, ಭಕ್ತ ಪ್ರಹ್ಲಾದ, ಯಾರಿವನು…. ಹೀಗೆ ಪುನೀತ್ ರಾಜ್ ಕುಮಾರ್ ಎಂಬ ಪುಟ್ಟ ಬಾಲಕ ಬೆಳ್ಳಿತೆರೆಯ ಅನಭಿಷಿಕ್ತ ದೊರೆಯಾಗಿ ಬೆಳೆದೇ ಬಿಟ್ಟಿದ್ದ. 1985ರಲ್ಲಿ ತೆರೆಕಂಡ ಬೆಟ್ಟದ ಹೂ ಚಿತ್ರವು ಅಪ್ಪುವನ್ನು ಮತ್ತೊಂದು ಮಜಲಿಗೆ ಹೊತ್ತೊಯ್ಯಿತು. ಈ ಚಿತ್ರದಲ್ಲಿ ರಾಮುವಿನ ಪಾತ್ರ ವಹಿಸಿ ಪುನೀತ್ ಮಾಡಿದ ಮನೋಜ್ಞ ಅಭಿನಯವು ಅವರ ಮುಡಿಗೆ ರಾಷ್ಟ್ರಪ್ರಶಸ್ತಿಯ ಗರಿಯನ್ನು ತೊಡಿಸಿತು. ತಾನೊಬ್ಬ ಅಪ್ಪಟ ಕಲಾವಿದ ಎಂಬುದನ್ನು ಈ ಚಿತ್ರದ ಮೂಲಕ ಅಪ್ಪು ಸಾಬೀತುಪಡಿಸಿದ್ದರು.
13 ವರ್ಷಗಳ ಕಾಲ ಬೆಳ್ಳಿತೆರೆಯಲ್ಲಿ ಮಿಂಚಿದ ಪುನೀತ್ ಮತ್ತೆ 13 ವರ್ಷ ತೆರೆಯ ಮರೆಗೆ ಸರಿದರು. ತಮ್ಮದೇ ಆದ ಉದ್ಯಮ, ವಹಿವಾಟು ಎಂದು ಬೇರೆ ದಾರಿಯತ್ತ ಸಾಗಿದರು. ಆದರೆ, ಚಿತ್ರರಂಗವೆಂಬ ಅಯಸ್ಕಾಂತದಿಂದ ಹೆಚ್ಚು ಕಾಲ ದೂರ ಉಳಿಯಲು ಅವರಿಗೆ ಸಾಧ್ಯವಾಗಲಿಲ್ಲ. ಕನ್ನಡಿಗರ ಹೃದಯ ಸಿಂಹಾಸನ ಏರಲು ಅವರಿಗೆ ಬಹಳ ದಿನ ಬೇಕಾಗಲಿಲ್ಲ. 2002ರಲ್ಲಿ ಅವರು ಮಾದರಿ ಯುವಕನ ಪಾತ್ರದಲ್ಲಿ ‘ಅಪ್ಪು’ವಾಗಿ ಅವತರಿಸಿದರು. ಮೊದಲ ಚಿತ್ರವೇ ದೊಡ್ಡ ಯಶಸ್ಸು ಪಡೆಯಿತು. ನಂತರದಲ್ಲಿ ಅವರು ತಿರುಗಿ ನೋಡಿದ್ದೇ ಇಲ್ಲ. ಒಂದಾದ ಮೇಲೆ ಒಂದರಂತೆ ಚಿತ್ರಗಳು ಅಪ್ಪುವನ್ನು ಅರಸಿ ಬಂದವು. 2007ರಲ್ಲಿ ಅರಸು ಚಿತ್ರದ ನಟನೆಗಾಗಿ ಫಿಲಂಫೇರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಅದೇ ವರ್ಷ ತೆರೆಕಂಡ ಮಿಲನ ಸಿನಿಮಾ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಂದುಕೊಟ್ಟಿತು. ನಂತರದಲ್ಲಿ ಪೃಥ್ವಿ, ಪರಮಾತ್ಮ, ಅಣ್ಣಾಬಾಂಡ್, ನಿನ್ನಿಂದಲೇ, ಚಕ್ರವ್ಯೂಹ, ದೊಡ್ಮನೆ ಹುಡ್ಗ, ರಾಜಕುಮಾರ, ಅಂಜನಿ ಪುತ್ರ, ರಾಜರಥ, ನಟಸಾರ್ವಭೌಮ, ಯುವರತ್ನ, ಜೇಮ್ಸ್ ಹೀಗೆ ಹತ್ತು ಹಲವು ಸಿನಿಮಾಗಳ ಮೂಲಕ ಅಪ್ಪು ಚಿತ್ರರಸಿಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದರು. ಅವರು ಪಾತ್ರವನ್ನು ಅಕ್ಷರಶಃ ಜೀವಿಸತೊಡಗಿದ್ದರು.
ಸ್ಫೂರ್ತಿಯ ಸೆಲೆಯಾದ ಜೀವ:
ದೊಡ್ಡ ನಟನೆಂಬ ಖ್ಯಾತಿ, ಶ್ರೀಮಂತಿಕೆ, ದೊಡ್ಡಸ್ತಿಕೆ, ಉತ್ತಮ ಆದಾಯ, ಸ್ಟಾರ್ ಪಟ್ಟ ಹೊಂದಿದ್ದ ಪುನೀತ್ ಅವರು ತಮಗೂ ಹೊರಜಗತ್ತಿಗೂ ನಡುವೆ ದೊಡ್ಡ ಗೋಡೆ ಕಟ್ಟಿ ಐಷಾರಾಮಿ ಬಂಗಲೆಯೊಳಗೇ ಉಳಿಯಬಹುದಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ಸ್ಟಾರ್ ಎಂಬ ಅಹಮಿಕೆಯನ್ನು ಬದಿಗಿಟ್ಟು, ಸೆಲೆಬ್ರಿಟಿಯೆಂಬ ಮ್ಯಾನರಿಸಂಗಳನ್ನೆಲ್ಲ ಗಂಟುಮೂಟೆ ಕಟ್ಟಿಟ್ಟು ಎಲ್ಲರೊಳಗೊಂದಾಗಿ ಬದುಕಿದರು. ವಿವಾದಗಳಿಂದ, ರಾಜಕೀಯದಿಂದ, ಕೆಸರೆರಚಾಟದಿಂದ ದೂರ ಉಳಿದರು. ಹೊಸಬರ ಸಿನಿಮಾಗಳಿಗೆ ಉತ್ತೇಜನ ನೀಡಿದರು. ಕಪಟವಿಲ್ಲದ ನಿಷ್ಕಲ್ಮಶ ನಗುವಿನ ಮೂಲಕ ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರ ಹೃದಯದಲ್ಲೂ ವೀರಾಜಮಾನರಾದರು. ಹಿರಿಯರು, ಕಿರಿಯರು ಎಂಬ ಭೇದವಿಲ್ಲದೇ ಎಲ್ಲರನ್ನೂ ಅಪ್ಪಿಕೊಂಡರು, ಎಲ್ಲರನ್ನೂ ಗೌರವಿಸಿದರು. ಯಾರನ್ನೂ ನೋಯಿಸದೇ, ಯಾವ ವಿವಾದಗಳಿಗೂ ಸಿಲುಕಿಕೊಳ್ಳದೇ ಚಿನ್ನದ ಮನುಷ್ಯನಾಗಿ ಬಾಳಿದರು.
ಕೊಡುಗೈ ದಾನಿ ಅಪ್ಪು
ಅಭಿನಯ ಲೋಕದಲ್ಲಿ ಛಾಪು ಮೂಡಿಸಿದ ಅಪ್ಪು ಮತ್ತೊಂದು ಕಡೆ ಸದ್ದಿಲ್ಲದೇ ಸಮಾಜ ಸೇವೆಯಲ್ಲಿ ತೊಡಗಿದ್ದರು. ಈ ವಿಷಯ ಜಗಜ್ಜಾಹೀರಾಗಿದ್ದು ಅವರು ಅಗಲಿದ ಬಳಿಕವೇ. ಅಂದರೆ, ಒಂದು ಕೈಯ್ಯಲ್ಲಿ ಕೊಟ್ಟಿದ್ದು, ಮತ್ತೊಂದು ಕೈಗೆ ಗೊತ್ತಾಗಬಾರದು ಎಂಬ ತತ್ವವನ್ನು ಶಿರಸಾವಹಿಸಿ ಪಾಲಿಸಿದ್ದ ಅಪ್ಪು, ಯಾವ ಪ್ರಚಾರದ ಗೀಳಿಗೂ ಹೋಗದೇ ಸಮಾಜಕ್ಕೆ ತಮ್ಮ ಕೈಲಾದ ಸೇವೆ ಮಾಡಿದ್ದರು. ಕೊರೊನಾ ಸೋಂಕಿನ ಸಂದರ್ಭದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂ. ನೀಡಿದರು, ಕೆಎಂಎಫ್ ಉತ್ಪನ್ನವಾದ ನಂದಿಗೆ ಹಾಲಿಗೆ ಗೌರವಧನವನ್ನೇ ಪಡೆಯದೇ ರಾಯಭಾರಿಯಾಗಿ ದುಡಿದರು, 2019ರಲ್ಲಿ ಉತ್ತರ ಕರ್ನಾಟಕವು ಪ್ರವಾಹದ ಸಂಕಷ್ಟ ಎದುರಿಸಿದಾಗ ಪರಿಹಾರಕ್ಕೆ ಧಾವಿಸಿದರು. ಅನೇಕ ಅನಾಥರಿಗೆ ಆಸರೆಯಾದರು, ತುಳಿತಕ್ಕೊಳಗಾದವರಿಗೆ ಶಕ್ತಿಯಾದರು, ಬಡ ಮಕ್ಕಳ ಶಿಕ್ಷಣಕ್ಕೆ ನೆರವಾದರು. ವಿವಿಧ ರೀತಿಯ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅಪ್ಪು ಯಾರಿಗೂ ತಿಳಿಯದಂತೆಯೇ ಮತ್ತಷ್ಟು ಎತ್ತರಕ್ಕೆ ಏರಿಬಿಟ್ಟಿದ್ದರು.
46 ವರ್ಷಗಳಷ್ಟೇ ಬದುಕಿದರೂ ಅವರು ದೊಡ್ಡ ಹೆಸರನ್ನು, ಅಪಾರ ಪ್ರೀತಿಯನ್ನು ಉಳಿಸಿಹೋಗಿದ್ದಾರೆ. ತಮ್ಮಮಾಸದ ನಗು, ಸರಳತೆ, ಸ್ನೇಹಪರತೆಯಿಂದ ಇಂದಿಗೂ ಅವರು ಕನ್ನಡಿಗರ ಉಸಿರಾಗಿ ಉಳಿದಿದ್ದಾರೆ. ಅವರನ್ನು ಕರುನಾಡು ಬರೀ ಪ್ರೀತಿಸುತ್ತಿಲ್ಲ, ಆರಾಧಿಸುತ್ತಿದೆ.