ಮುಂಬೈ: ಪಾಕಿಸ್ತಾನ ಮೂಲದ ನಿಷೇಧಿತ ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಮತ್ತು ಯುವಕರನ್ನು ಮೂಲಭೂತವಾದದತ್ತ ತಳ್ಳುತ್ತಿದ್ದ ಆರೋಪದ ಮೇಲೆ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಪುಣೆಯಲ್ಲಿ ಸೋಮವಾರ ಬಂಧಿಸಿದೆ.
ಕಳೆದ ತಿಂಗಳಿನಿಂದ ಎಟಿಎಸ್ ಕಣ್ಗಾವಲಿನಲ್ಲಿದ್ದ ಜುಬೈರ್ ಹಂಗರಗೇಕರ್ ಬಂಧಿತ ಆರೋಪಿ. ಬಂಧನದ ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಶೇಷ ಯುಎಪಿಎ ನ್ಯಾಯಾಲಯವು ನವೆಂಬರ್ 4ರವರೆಗೆ ಆತನನ್ನು ಪೊಲೀಸ್ ವಶಕ್ಕೆ ಒಪ್ಪಿಸಿದೆ.
ದೇಶ ವಿರೋಧಿ ಕೃತ್ಯಗಳಲ್ಲಿ ಭಾಗಿ
ಪುಣೆ ನಗರದ ಕೊಂಡ್ವಾ ಪ್ರದೇಶದಲ್ಲಿ ಬಂಧಿತನಾದ ಆರೋಪಿ ಜುಬೈರ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯು ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಮಹಾರಾಷ್ಟ್ರ ಮತ್ತು ಇತರ ನಗರಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಯುವಕರನ್ನು ಪ್ರಚೋದಿಸುವ ಸಾಮಗ್ರಿಗಳು ಪತ್ತೆ
ಸಾಫ್ಟ್‌ವೇರ್ ಎಂಜಿನಿಯರ್‌ನ ನಿವಾಸದಲ್ಲಿ ಶೋಧ ನಡೆಸಿದಾಗ, ಯುವಕರನ್ನು ಮೂಲಭೂತವಾದದತ್ತ ಪ್ರಚೋದಿಸಲು ಬಳಸುತ್ತಿದ್ದ ಆಕ್ಷೇಪಾರ್ಹ ಸಾಮಗ್ರಿಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ, ಅಕ್ಟೋಬರ್ 27ರಂದು ಪುಣೆ ರೈಲ್ವೆ ನಿಲ್ದಾಣದಲ್ಲಿ ಚೆನ್ನೈ ಎಕ್ಸ್‌ಪ್ರೆಸ್‌ನಿಂದ ನಾಲ್ವರು ಶಂಕಿತರನ್ನು ಪುಣೆ ಪೊಲೀಸರು ವಶಕ್ಕೆ ಪಡೆದಿದ್ದರು. ಅಕ್ಟೋಬರ್ 9ರಂದು ಪುಣೆಯ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದ ಎಟಿಎಸ್, ಎಲೆಕ್ಟ್ರಾನಿಕ್ ಸಾಧನಗಳು, ದಾಖಲೆಗಳು ಮತ್ತು ಈ ವಲಯದಲ್ಲಿ ವ್ಯಾಪಕ ಭಯೋತ್ಪಾದಕ ಜಾಲದ ಸುಳಿವು ನೀಡುವ ವಸ್ತುಗಳನ್ನು ವಶಪಡಿಸಿಕೊಂಡಿತ್ತು.
ಆನ್‌ಲೈನ್ ಮೂಲಭೂತವಾದದ ಜಾಲ
ಇತ್ತೀಚೆಗೆ ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಬಂಧಿತ ಪ್ರಕರಣದಲ್ಲಿ ದೆಹಲಿಯ ಸಾದಿಕ್ ನಗರದಿಂದ ಮೊಹಮ್ಮದ್ ಅದ್ನಾನ್ ಖಾನ್ ಅಲಿಯಾಸ್ ಅಬು ಮುಹಾರಿಬ್ (19) ಮತ್ತು ಭೋಪಾಲ್‌ನಿಂದ ಅದ್ನಾನ್ ಖಾನ್ ಅಲಿಯಾಸ್ ಅಬು ಮೊಹಮ್ಮದ್ (20) ಎಂಬವರನ್ನು ಬಂಧಿಸಲಾಗಿತ್ತು. ಈ ಬಂಧನಗಳು ಐಎಸ್‌ನ ಆನ್‌ಲೈನ್ ಮೂಲಭೂತವಾದಿ ಘಟಕವು ಹೆಚ್ಚು ಸಕ್ರಿಯವಾಗಿರುವುದನ್ನು ಸೂಚಿಸುತ್ತವೆ. ಈ ಇಬ್ಬರೂ ಆನ್‌ಲೈನ್ ಮೂಲಕವೇ ಪ್ರಚೋದನೆಗೆ ಒಳಗಾಗಿದ್ದು, ಸಿರಿಯಾದಲ್ಲಿರುವ ಹ್ಯಾಂಡ್ಲರ್‌ಗೆ ವರದಿ ಮಾಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಇದು ಸಿರಿಯಾದಲ್ಲಿ ಗುಂಪಿನ ಪುನರುತ್ಥಾನವನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಅಲ್ಲದೇ ಭಾರತದಲ್ಲಿನ ಕಾರ್ಯಾಚರಣೆಗಳನ್ನು ಸಿರಿಯಾದಿಂದಲೇ ನಿರ್ವಹಿಸಲಾಗುತ್ತಿದೆ ಎಂದು ಗುಪ್ತಚರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಆ್ಯಸಿಡ್ ದಾಳಿ ಪ್ರಕರಣಕ್ಕೆ ರೋಚಕ ತಿರುವು: ಟಾಯ್ಲೆಟ್ ಕ್ಲೀನರ್ ಸುರಿದು ನಾಟಕವಾಡಿದ್ದ ಯುವತಿ!



















