ಬೆಳಗಾವಿ: ಬಾಣಂತಿ ಪತ್ನಿ ಹಾಗೂ ಮಗುವನ್ನು ಕಳುಹಿಸಿಕೊಡುವಂತೆ ಒತ್ತಾಯಿಸಿ ಅಳಿಯ ಹಾಗೂ ಕುಟುಂಬಸ್ಥರು ಅತ್ತೆಯ ಮೈಮೇಲಿನ ಬಟ್ಟೆ ಹರಿದು ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದ ಲಕ್ಷ್ಮೀ ನಗರದಲ್ಲಿ ಈ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ಹೊನಗಾ ಗ್ರಾಮದ ಬೈರು ಮೇತ್ರಿ( 25) ಹಾಗೂ ಆತನ ಕುಟುಂಬಸ್ಥರು ಸೇರಿ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಪ್ರತೀಕ್ಷಾ ಮೇತ್ರಿ( 22) ಹಾಗೂ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ವರ್ಷದ ಹಿಂದೆಯಷ್ಟೇ ಬೈರು, ಪ್ರತೀಕ್ಷಾ ವಿವಾಹವಾಗಿದ್ದರು. ಆದರೆ, ಮದುವೆಯ ನಂತರ ಪತಿ, ಪತ್ನಿಯ ಮೇಲೆ ಸಂಶಯ ಮಾಡುತ್ತಿದ್ದ. ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ವಿಚಾರವಾಗಿ ನಾಲ್ಕು ಬಾರಿ ಎರಡು ಕುಟುಂಬಗಳ ನಡುವೆ ರಾಜಿ ಸಂಧಾನ ಮಾಡಲಾಗಿತ್ತು. ಪ್ರತೀಕ್ಷಾ ಕಳೆದ 11 ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಬೈರು ಹಾಗೂ ಕುಟುಂಬಸ್ಥರು ಮಗು, ಪತ್ನಿಯನ್ನು ಕಳುಹಿಸಿಕೊಡುವಂತೆ ಹೇಳಿದ್ದಾರೆ ಎನ್ನಲಾಗಿದೆ. ಪ್ರತೀಕ್ಷಾ ತವರು ಮನೆಗೆ ಬಂದು ಗಲಾಟೆ ಕೂಡ ಮಾಡಿದ್ದಾರೆ ಎನ್ನಲಾಗಿದೆ.
ಕಳುಹಿಸಲು ಒಪ್ಪದಿದ್ದಕ್ಕೆ ಸಾರ್ವಜನಿಕವಾಗಿಯೇ ಪತ್ನಿ ಹಾಗೂ ತಾಯಿಯ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.