ನವದೆಹಲಿ: ಸಿಖ್ ಸಮುದಾಯದ ಕುರಿತು ರಾಹುಲ್ ಗಾಂಧಿ ಹೇಳಿರುವ ಹೇಳಿಕೆ ಖಂಡಿಸಿ ದೆಹಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಿಖ್ ಸೆಲ್ ಸದಸ್ಯರು ರಾಹುಲ್ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದಾರೆ.
ಬಿಜೆಪಿ ಸಿಖ್ ಸಮುದಾಯದ ಸದಸ್ಯರು, ಮಹಿಳೆಯರು ಸೇರಿದಂತೆ ಹಲವಾರು ಜನರು ರಾಹುಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ರಾಹುಲ್ ವಿರುದ್ಧ ಘೋಷಣೆ ಕೂಗಲಾಗಿದೆ.
ವಿಜ್ಞಾನ ಭವನದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ರಾಹುಲ್ ಗಾಂಧಿಯವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ, ಪೊಲೀಸರು ಅವರನ್ನು ತಡೆದರು. ಬಿಜೆಪಿ ನಾಯಕ ಆರ್ ಪಿ ಸಿಂಗ್ ಅವರು “ರಾಹುಲ್ ಗಾಂಧಿ ಸಿಖ್ಖರ ಕ್ಷಮೆ ಯಾಚಿಸಬೇಕು. ಅವರು ಭಾರತದ ಮಾನಹಾನಿ ಮಾಡಲು ವಿದೇಶಿ ನೆಲ ಬಳಕೆ ಮಾಡಿದ್ದಾರೆ. ಸಿಖ್ಖರು ಪೇಟವನ್ನು ಧರಿಸಲು ಮತ್ತು ಗುರುದ್ವಾರಕ್ಕೆ ಹೋಗಲು ಅನುಮತಿಸುವುದಿಲ್ಲ ಎಂದು ಸಿಖ್ಖರ ಬಗ್ಗೆ ಹೇಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.