ಕಲಬುರಗಿ: ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದು, ಪೊಲೀಸರು ಹಲವರನ್ನು ಬಂಧಿಸಿದ್ದಾರೆ.
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಪ್ರತ್ಯೇಕ ರಾಜ್ಯ ಬೇಕೆಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಭಾಗದ ಜನರು ಪ್ರತಿಭಟನೆ ನಡೆಸುತ್ತಿದ್ದರು. ಕಳೆದೊಂದು ವರ್ಷದಿಂದ ಪ್ರತ್ಯೇಕ ರಾಜ್ಯದ ಕೂಗು ಹೆಚ್ಚಾಗಿದ್ದು, ಇಂದು ಕೂಡ ಪ್ರತ್ಯೇಕ ರಾಜ್ಯದ ಪ್ರತಿಭಟನೆ ನಡೆಯಿತು. ಈ ಹಿನ್ನೆಲೆಯಲ್ಲಿ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ ಎನ್ನಲಾಗಿದೆ. ಕಳೆದ ವರ್ಷವೂ ಕಲಬುರಗಿಯಲ್ಲಿ ಕನ್ನಡ ರಾಜ್ಯೋತ್ಸವದ ದಿನದಂದೇ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬಂದಿತ್ತು. ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನ ನಡೆದಿತ್ತು. ಈ ವೇಳೆ ಕೂಡ ಹಲವರನ್ನು ವಶಕ್ಕೆ ಪಡೆಯಲಾಗಿತ್ತು.