ಬೆಳಗಾವಿ: ಆಸ್ತಿ ವಿಚಾರಕ್ಕೆ ಪಾಪಿ ಮಗನೊಬ್ಬ ತಾಯಿಯನ್ನೇ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಡಿಕೇರಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಸ್ತಿ ವಿಚಾರವಾಗಿ ಗಲಾಟೆ ಮಾಡಿ ಮಗ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಮಹಾದೇವಿ ತೋಲಗಿ(70) ಮಗಿನಿಂದಲೇ ಹತ್ಯೆಯಾದ ದುರ್ದೈವ ತಾಯಿ.
ಈರಣ್ಣ ತೋಲಗಿ(34) ಹತ್ಯೆಗೈದ ಪಾಪಿ ಮಗ. ಆಸ್ತಿ ವಿಚಾರವಾಗಿ ತಾಯಿ ಹಾಗೂ ಮಗನ ಮಧ್ಯೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ವೃದ್ಧ ತಾಯಿಯೊಂದಿಗೆ ದಿನನಿತ್ಯ ಕಂಠಪೂರ್ತಿ ಕುಡಿದು ಬಂದು ಮಗ ಜಗಳ ಮಾಡುತ್ತಿದ್ದ. ಹಿಂದೆಯೂ ತಾಯಿಯ ಮೇಲೆ ಮದ್ಯದ ಅಮಲಿನಲ್ಲಿ ಹಲ್ಲೆ ನಡೆಸಿದ್ದ ಎಂದು ತಿಳಿದು ಬಂದಿದೆ.
ಆದರೆ, ಶನಿವಾರ ತಡರಾತ್ರಿ ಕುಡಿದು ಬಂದು ತಾಯಿಯೊಂದಿಗೆ ಗಟಾಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ತಾಯಿ ಬುದ್ಧ ಮಾತು ಹೇಳಿದ್ದಾರೆ. ಆಗ ನಶೆಯಲ್ಲಿದ್ದ ಪಾಪಿ ಅರ್ಧ ಸುಟ್ಟಿದ್ದ ಕಟ್ಟಿಗೆ ಹಿಡಿದು ತಾಯಿ ಮೇಲೆ ಮನಬಂದಂತೆ ತಲೆಗೆ ಹೊಡೆದಿದ್ದಾನೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಸಾವನ್ನಪ್ಪಿದ್ದಾಳೆ.
ದೊಡವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಬೈಲಹೊಂಗಲ ಡಿವೈಎಸ್ಪಿ ರವಿ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.