ಶಿವಮೊಗ್ಗ : ಬೈಕ್ ಸವಾರನನ್ನು ಅಪಘಾತದಿಂದ ರಕ್ಷಿಸಲು ಹೋಗಿ ಖಾಸಗಿ ಬಸ್ ಪಲ್ಟಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಕುಮದ್ವತಿ ಕಾಲೇಜು ಮುಂಭಾಗ ನಡೆದಿದೆ.
‘ವಿಜಯ’ ಖಾಸಗಿ ಬಸ್ ಪಲ್ಟಿಯಾಗಿದೆ. ಮಾಹಿತಿಯ ಪ್ರಕಾರ, ಬಸ್ ಮುಂದೆ ಬೈಕ್ ಸಾಗುತ್ತಿದ್ದು, ಈ ವೇಳೆ ಬೈಕ್ ಸವಾರನನ್ನು ತಪ್ಪಿಸಲು ಬಸ್ ಚಾಲಕ ಮೊದಲಿಗೆ ಎಡಗಡೆ ತಿರುಗಿಸಿದ್ದಾನೆ. ಇದೇ ವೇಳೆ ಬೈಕ್ ಸವಾರ ಕೂಡ ಎಡಗಡೆ ತಿರುಗಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಗೊಂದಲಮಯವಾಗಿದೆ. ಬಳಿಕ ಎಚ್ಚೆತ್ತ ಚಾಲಕ ಬಸ್ ಅನ್ನು ಬಲಗಡೆ ತಿರುಗಿಸುವ ಪ್ರಯತ್ನ ಮಾಡಿದಾಗ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಸ್ ಪಲ್ಟಿಯಾಗಿದೆ.
ಅಪಘಾತದ ಪರಿಣಾಮವಾಗಿ ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗನ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಕಾರು – ಬೈಕ್ ನಡುವೆ ಮುಖಾಮುಖಿ ಡಿಕ್ಕಿ.. ಸವಾರ ಸ್ಥಳದಲ್ಲೇ ಸಾವು



















