ಪ್ರಯಾಗ್‌ರಾಜ್: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು(Narendra Modi) ನಾಳೆ(ಬುಧವಾರ) ಭೇಟಿ ನೀಡಲಿದ್ದು, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲಿದ್ದಾರೆ. ದೆಹಲಿ ವಿಧಾನಸಭೆ ಚುನಾವಣೆಯೂ ನಾಳೆಯೇ ನಡೆಯಲಿದ್ದು, ಅದೇ ದಿನ ಮೋದಿ ಪುಣ್ಯಸ್ನಾನ ಮಾಡುತ್ತಿರುವುದು ಭಾರೀ ಚರ್ಚೆಗೂ ಕಾರಣವಾಗಿದೆ.
ಬುಧವಾರ ಬೆಳಗ್ಗೆ 10.05 ಗಂಟೆಗೆ ಪ್ರಧಾನಿ ಮೋದಿ ಪ್ರಯಾಗ್‌ರಾಜ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಅಲ್ಲಿಂದ ಅವರು 10.10ಕ್ಕೆ ಡಿಪಿಎಸ್ ಹೆಲಿಪ್ಯಾಡ್‌ಗೆ ತಲುಪಿ, ಅಲ್ಲಿಂದ ಏರಿಯಲ್ ಘಾಟ್‌ಗೆ ಪ್ರಯಾಣ ಬೆಳೆಸಲಿದ್ದಾರೆ. 10.50ಕ್ಕೆ ಏರಿಯಲ್ ಘಾಟ್‌ನಿಂದ ಬೋಟ್ ಮೂಲಕ ಮಹಾಕುಂಭ ಸ್ಥಳಕ್ಕೆ ತೆರಳಲಿದ್ದಾರೆ. 11ರಿಂದ 11.30ರವರೆಗೆ ತ್ರಿವೇಣಿ ಸಂಗಮದಲ್ಲಿ ಮಿಂದೇಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
11.45ಕ್ಕೆ ಮತ್ತೆ ದೋಣಿ ಮೂಲಕ ಏರಿಯಲ್ ಘಾಟ್ ಗೆ ಬಂದು, ಡಿಪಿಎಸ್ ಹೆಲಿಪ್ಯಾಡ್‌ಗೆ ಮರಳಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಪ್ರಯಾಗ್ ರಾಜ್ ಏರ್ಪೋರ್ಟ್ ನಿಂದ ದೆಹಲಿಗೆ ವಾಪಸಾಗಲಿದ್ದಾರೆ. ಕುಂಭಮೇಳ ಭೇಟಿಯ ಸಂದರ್ಭದಲ್ಲಿ ಮೋದಿಯವರು ಸಾಧು-ಸಂತರೊಂದಿಗೆ ಸಂವಾದ ನಡೆಸುವ ಮತ್ತು ಮಹಾಕುಂಭದಲ್ಲಿ ಮಾಡಿರುವ ವ್ಯವಸ್ಥೆಗಳನ್ನು ಪರಿಶೀಲಿಸುವ ನಿರೀಕ್ಷೆಯಿದೆ.

ಫೆ.5ರ ಮಹತ್ವವೇನು?
ಫೆಬ್ರವರಿ 5ರಂದು ಹಿಂದೂಗಳು ಮಾಘ ಅಷ್ಟಮಿ ಮತ್ತು ಭೀಷ್ಮ ಅಷ್ಟಮಿಯನ್ನು ಆಚರಿಸುತ್ತಾರೆ. ಮಾಘ ಮಾಸದ 8ನೇ ದಿನವನ್ನು ಮಾಘ ಅಷ್ಟಮಿ ಎಂದು ಕರೆಯಲಾಗುತ್ತದೆ. ಈ ದಿನ ಪ್ರಯಾಗ್‌ರಾಜ್‌ನಲ್ಲಿ ಅನೇಕರು ಪುಣ್ಯಸ್ನಾನ ಮಾಡಿ, ಧ್ಯಾನದಲ್ಲಿ ತೊಡಗುತ್ತಾರೆ. ಇದರ ಜೊತೆಗೆ ಬುಧವಾರ ಗುಪ್ತ ನವರಾತ್ರಿಯ ದಿನವೂ ಹೌದು. ಇನ್ನು ಮಹಾಭಾರತದ ಭೀಷ್ಮನ ಸ್ಮರಣಾರ್ಥ ಭೀಷ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಸೂರ್ಯನು ಉತ್ತರಾಯಣ ಮತ್ತು ಶುಕ್ಲಪಕ್ಷದೆಡೆಗೆ ಸಾಗುವವರೆಗೂ ಭೀಷ್ಮ ಬಾಣಗಳ ಹಾಸಿಗೆಯಲ್ಲಿ ಮಲಗಿದ್ದರು ಎಂಬ ಪ್ರತೀತಿ ಇದೆ. ಈ ಹಿನ್ನೆಲೆಯಲ್ಲಿ ಫೆ.5ರಂದು ಭೀಷ್ಮಾಷ್ಟಮಿಯನ್ನೂ ಆಚರಿಸಲಾಗುತ್ತದೆ.