ವಾಷಿಂಗ್ಟನ್: ಮೂರು ದಿನಗಳ ಪ್ರವಾಸಕ್ಕಾಗಿ ಅಮೆರಿಕಕ್ಕೆ ತೆರಳಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು ಫಿಲಡೆಲ್ಫಿಯಾ ತಲುಪಿದ್ದಾರೆ.
ಪ್ರಧಾನಿ ಮೋದಿ ಅವರು ಭಾರತೀಯ ಸಮುದಾಯದ ಸಭೆಯನ್ನು ಉದ್ದೇಶಿಸಿ ಮತ್ತು ವಿಶ್ವಸಂಸ್ಥೆಯ ‘ಭವಿಷ್ಯದ ಶೃಂಗಸಭೆ’ಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಮೆರಿಕಕ್ಕೂ ಹೋಗುವ ಮುನ್ನ ಮಾತನಾಡಿದ್ದ ಪ್ರದಾನಿ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಭಾರತೀಯ ವಲಸಿಗರನ್ನು ಭೇಟಿಯಾಗಲು ಉತ್ಸುಕರಾಗಿದ್ದೇನೆ ಎಂದಿದ್ದರು.
ಅಮೆರಿಕಾದಲ್ಲಿ ಮೋದಿ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರ ತವರು ವಿಲ್ಮಿಂಗ್ಟನ್, ಡೆಲವೇರ್ ನಲ್ಲಿ ಆಯೋಜಿಸಿರುವ ಕ್ವಾಡ್ ಲೀಡರ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಆಸ್ಟ್ರೇಲಿಯನ್ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಮತ್ತು ಅವರ ಜಪಾನಿನ ಪ್ರತಿನಿಧಿ ಫ್ಯೂಮಿಯೊ ಕಿಶಿಡಾ ಅವರನ್ನು ಭೇಟಿಯಾಗಲಿದ್ದಾರೆ.
ಪ್ರವಾಸಕ್ಕೂ ಮುನ್ನ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಪ್ರಧಾನಿ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸಮೃದ್ಧಿಗಾಗಿ ಕೆಲಸ ಮಾಡಲು ಕ್ವಾಡ್ ಶೃಂಗಸಭೆ ವೇದಿಕೆಯಾಗಿ ಹೊರಹೊಮ್ಮಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರನ್ನು ಭೇಟಿ ಮಾಡಲು ಮತ್ತು ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಲು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.