ವಯನಾಡು: ವ್ಯಾಪಕ ಮಳೆಯಿಂದಾಗಿ ವಯನಾಡಿನಲ್ಲಿ ಉಂಟಾದ ಭೂ ಕುಸಿತ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ (Narendra Modi) ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿ ಕಂಡು ವಿಷಾಧಿಸಿದ್ದಾರೆ.
ನಂತರ ಅಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಗಳ ಬಗ್ಗೆ ಪರಿಶೀಲನಾ ಸಭೆ ನಡೆಸಿದರು. ಕೇರಳದ ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಿಂದ ಸಂತ್ರಸ್ತರಾದವರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಭರವಸೆ ನೀಡಿದ್ದಾರೆ.
ನಾವೆಲ್ಲರೂ ಒಗ್ಗೂಡಿ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಹಾಯ ಮಾಡಬೇಕು. ದುರಂತದಲ್ಲಿ ನೂರಾರು ಕುಟುಂಬಗಳ ಕನಸುಗಳು ನಲುಗಿವೆ. ಪ್ರಕೃತಿ ತನ್ನ ಉಗ್ರ ರೂಪವನ್ನು ತೋರಿಸಿದೆ, ನಾನು ಅಲ್ಲಿಗೆ ಹೋಗಿ ನೋಡಿದೆ ಎಂದು ತಿಳಿಸಿದ್ದಾರೆ.
ನಾನು ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿ ಅವರ ನೋವು ಆಲಿಸಿದ್ದೇನೆ. ಆಸ್ಪತ್ರೆಗೆ ಹೋಗಿ ಅಲ್ಲಿ ಗಾಯಾಳುಗಳನ್ನು ಭೇಟಿಯಾದೆ. ವಯನಾಡಿನಲ್ಲಿ ಭೂಕುಸಿತದ ಘಟನೆಯ ನಂತರ ನಾನು ತಕ್ಷಣವೇ ಮುಖ್ಯಮಂತ್ರಿಯೊಂದಿಗೆ ಮಾತನಾಡಿ ಸಹಾಯವನ್ನು ಕಳುಹಿಸಿದೆ. ಎಲ್ಲರೂ ಆಪತ್ತಿನಲ್ಲಿ ಸಹಾಯ ಮಾಡಲು ಮುಂದೆ ಬಂದರು. ಭಾರತ ಸರ್ಕಾರ ಮತ್ತು ಇಡೀ ದೇಶವು ಸಂತ್ರಸ್ತರೊಂದಿಗಿದೆ ಎಂದು ಹೇಳಿದ್ದಾರೆ.
ಕೇರಳದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಘಟನೆಯ ನಂತರ ಪ್ರತಿ ಕ್ಷಣವೂ ಮಾಹಿತಿ ತೆಗೆದುಕೊಳ್ಳುತ್ತಿದ್ದೇನೆ. ಘಟನೆಯಲ್ಲಿ ನೂರಾರು ಕುಟುಂಬಗಳ ಕನಸುಗಳು ಭಗ್ನವಾಗಿವೆ. ಈ ರೀತಿಯ ಬಿಕ್ಕಟ್ಟಿನ ಸಮಯದಲ್ಲಿ, ನಾವು ಒಟ್ಟಾಗಿ ಕೆಲಸ ಮಾಡಿದಾಗ, ನಾವು ಉತ್ತಮ ಫಲಿತಾಂಶವನ್ನು ಪಡೆಯುತ್ತೇವೆ ಎಂದು ಪ್ರಧಾನಿ ಹೇಳಿದ್ದಾರೆ.
ಭೂಕುಸಿತದಿಂದಾಗಿ ಸುಮಾರು 417 ಜನರು ಪ್ರಾಣ ಕಳೆದುಕೊಂಡಿದ್ದು, ಇನ್ನೂ 200ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ. ಹಲವರು ಕುಟುಂಬ, ಮನೆ-ಮಠ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಹಲವರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತ ಆಸರೆಯಾಗುತ್ತಿದ್ದಾರೆ.