ಬೆಂಗಳೂರು: ನಮ್ಮ ಮೆಟ್ರೋ ರೈಲುಗಳ ಬೆಲೆಯೇರಿಕೆ ಮೂಲಕ ಭಾರಿ ಆಕ್ರೋಶಕ್ಕೆ ಗುರಿಯಾಗಿರುವ ಬಿಎಂಆರ್ ಸಿಎಲ್, ಟಿಕೆಟ್ ಬೆಲೆಯಲ್ಲಿ 10 ರೂ. ಇಳಿಸಿದರೂ ಜನ ವೀಕೆಂಡ್ ನಲ್ಲಿ ಮೆಟ್ರೋದಲ್ಲಿ ಸಂಚರಿಸಲು ಹಿಂದೇಟು ಹಾಕಿದ್ದಾರೆ. ಉದಾಹರಣೆಗೆ, ಸುಮಾರು 33 ರೂಪಾಯಿ ಇದ್ದ ಟಿಕೆಟ್ ಬೆಲೆಯನ್ನು 60 ರೂಪಾಯಿಗೆ ಏರಿಸಿ, ಈಗ ಕೇವಲ 10 ರೂಪಾಯಿ ಇಳಿಸಿರುವುದಕ್ಕೆ ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಮೆಟ್ರೋದ ಸಹವಾಸವೇ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಶನಿವಾರ ಹಾಗೂ ಭಾನುವಾರ ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿರುವುದೇ ಇದಕ್ಕೆ ನಿದರ್ಶನವಾಗಿದೆ.
ಕಳೆದ ಸೋಮವಾರ 8 ಲಕ್ಷದ 28 ಸಾವಿರ ಮಂದಿ ಮೆಟ್ರೋದಲ್ಲಿ ಪ್ರಯಾಣಿಸಿದ್ದರು. ಮಾರನೇ ದಿನ ಅಂದರೆ, ಮಂಗಳವಾರ ಈ ಸಂಖ್ಯೆ 7 ಲಕ್ಷದ 78 ಸಾವಿರಕ್ಕೆ ಇಳಿಕೆಯಾಯಿತು.. ಇನ್ನು ಬುಧವಾರ 7 ಲಕ್ಷದ 62 ಸಾವಿರ ಮಂದಿ ಮೆಟ್ರೋದಲ್ಲಿ ಓಡಾಡಿದರೆ, ಗುರುವಾರ 7 ಲಕ್ಷದ 51 ಮಂದಿ ಸಂಚರಿಸಿದ್ದಾರೆ. ವೀಕೆಂಡ್ ಆಗಿರುವ ಶನಿವಾರವಂತೂ ಪ್ರಯಾಣಿಕರ ಸಂಖ್ಯೆ 7 ಲಕ್ಷಕ್ಕಿಂತ ಕಡಿಮೆ ಇದೆ. ಶನಿವಾರ 6.9 ಲಕ್ಷ ಜನ ಮೆಟ್ರೋದಲ್ಲಿ ಸಂಚರಿಸಿದ್ದು, ಭಾನುವಾರವೂ ಇದೇ ಪರಿಸ್ಥಿತಿ ಮುಂದುವರಿದಿದೆ. ಇದರಿಂದಾಗಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿದಂತಾಗಿದೆ.
ಖಾಸಗಿ ವಾಹನಗಳಿಗೆ ಜೈ
ಸುಮಾರು 15-20 ಕಿಲೋಮೀಟರ್ ದೂರದಲ್ಲಿ ಆಫೀಸ್ ಇದ್ದವರು, ಟ್ರಾಫಿಕ್ ಕಿರಿಕಿರಿ, ಸಮಯದ ಉಳಿತಾಯದ ಹಿನ್ನೆಲೆಯಲ್ಲಿ ಜನ ಮೆಟ್ರೋ ನಿಲ್ದಾಣದವರೆಗೆ ಬೈಕ್ ತಂದು, ಅಲ್ಲಿ ಬೈಕ್ ಪಾರ್ಕ್ ಮಾಡಿ, ಮೆಟ್ರೋದಲ್ಲಿ ಸಂಚರಿಸುತ್ತಿದ್ದರು. ಆದರೆ, ಈಗ ಮೆಟ್ರೋ ಟಿಕೆಟ್ ಬೆಲೆಯಲ್ಲಿ ಭಾರಿ ಏರಿಕೆಯಾದ ಕಾರಣ ಜನ ಬೈಕ್, ಕಾರುಗಳಲ್ಲೇ ಕಚೇರಿಗೆ ತೆರಳಲು ಆರಂಭಿಸಿದ್ದಾರೆ.
ವೀಕೆಂಡ್ ನಲ್ಲಿ ಯಾವುದೇ ಕೆಲಸಕ್ಕೆ, ಶಾಪಿಂಗ್ ಗೆ ಕೂಡ ಖಾಸಗಿ ವಾಹನಗಳಲ್ಲೇ ಸಂಚರಿಸಿದ್ದಾರೆ. ಮೆಟ್ರೋಗೆ ದುಪ್ಪಟ್ಟು ಬೆಲೆ ಕೊಡುವುದಕ್ಕಿಂತ, ಸ್ವಂತ ವಾಹನದಲ್ಲೇ ಓಡಾಡುವುದು ಲೇಸು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಇನ್ನೂ ಕೆಲವರು, ತಡವಾದರೂ ಪರವಾಗಿಲ್ಲ, ಬಿಎಂಟಿಸಿ ಬಸ್ ಗಳಲ್ಲೇ ಸಂಚರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.