ರಾಯ್‌ಪುರ: ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದ ಪ್ರಿಯಕರನನ್ನು ಆತ ಬೆದರಿಸಲು ಬಳಸಿದ್ದ ಚಾಕುವಿನಿಂದಲೇ ಆತನದ್ದೇ ಕತ್ತು ಸೀಳಿ 16 ವರ್ಷದ ಗರ್ಭಿಣಿ ಬಾಲಕಿ ಹತ್ಯೆ ಮಾಡಿದ್ದಾಳೆ. ರಾಯ್‌ಪುರದ ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಲಾಡ್ಜ್‌ವೊಂದರಲ್ಲಿ ಯುವಕನ ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಘಟನೆಯು ಛತ್ತೀಸ್‌ಗಢವನ್ನು ಬೆಚ್ಚಿಬೀಳಿಸಿದೆ.
ಪೊಲೀಸರ ಪ್ರಕಾರ, ಬಿಲಾಸ್‌ಪುರದ ಕೋನಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿರುವ 16 ವರ್ಷದ ಬಾಲಕಿ, ತನ್ನ ಪ್ರಿಯಕರ ಮೊಹಮ್ಮದ್ ಸದ್ದಾಮ್‌ನನ್ನು ಭೇಟಿಯಾಗಲು ಸೆಪ್ಟೆಂಬರ್ 28ರಂದು ರಾಯ್‌ಪುರಕ್ಕೆ ಬಂದಿದ್ದಳು. ಬಿಹಾರ ಮೂಲದ ಸದ್ದಾಮ್, ಅಭನ್‌ಪುರದಲ್ಲಿ ಎಂಎಸ್ ಎಂಜಿನಿಯರಿಂಗ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ. ಇಬ್ಬರೂ ರಾಯ್‌ಪುರದ ರಾಮನ್ ಮಂದಿರ ವಾರ್ಡ್‌ನ ಸತ್ಕಾರ್ ಗಲಿಯಲ್ಲಿರುವ ‘ಏವಾನ್ ಲಾಡ್ಜ್’ನಲ್ಲಿ ತಂಗಿದ್ದರು.
ಕೊಲೆಗೆ ಕಾರಣವೇನು?
ತನಿಖೆಯ ಪ್ರಕಾರ, ಬಾಲಕಿ ಗರ್ಭಿಣಿಯಾಗಿದ್ದು, ಗರ್ಭಪಾತ ಮಾಡಿಸಿಕೊಳ್ಳುವಂತೆ ಸದ್ದಾಮ್ ಒತ್ತಾಯಿಸುತ್ತಿದ್ದ. ಈ ಕಾರಣಕ್ಕೆ ಇಬ್ಬರ ನಡುವಿನ ಸಂಬಂಧ ಹಳಸಿತ್ತು. ಕೆಲವು ದಿನಗಳ ಹಿಂದೆ ಲಾಡ್ಜ್‌ನ ಹೊರಗೆ ನಡೆದ ಜಗಳದ ವೇಳೆ ಸದ್ದಾಮ್ ಆಕೆಗೆ ಚಾಕು ತೋರಿಸಿ ಬೆದರಿಸಿದ್ದ.
ಸೆಪ್ಟೆಂಬರ್ 28ರ ರಾತ್ರಿ ಲಾಡ್ಜ್ ಕೋಣೆಯಲ್ಲಿ ಸದ್ದಾಮ್ ಮಲಗಿದ್ದಾಗ, ಬಾಲಕಿ ಅದೇ ಚಾಕುವನ್ನು ತೆಗೆದುಕೊಂಡು ತೀವ್ರ ಆವೇಶದಲ್ಲಿ ಆತನ ಕತ್ತು ಸೀಳಿ ಹತ್ಯೆ ಮಾಡಿದ್ದಾಳೆ. ನಂತರ, ಕೋಣೆಗೆ ಹೊರಗಿನಿಂದ ಬೀಗ ಹಾಕಿ, ಸದ್ದಾಮ್‌ನ ಮೊಬೈಲ್ ಫೋನ್ ತೆಗೆದುಕೊಂಡು ಪರಾರಿಯಾಗಿದ್ದಾಳೆ. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಲಾಡ್ಜ್ ಕೋಣೆಯ ಕೀಲಿಯನ್ನು ಸಮೀಪದ ರೈಲ್ವೆ ಹಳಿಗೆ ಎಸೆದಿದ್ದಾಳೆ.
ತಾಯಿಯ ಬಳಿ ತಪ್ಪೊಪ್ಪಿಗೆ
ಮರುದಿನ ಬೆಳಿಗ್ಗೆ ಬಾಲಕಿ ಬಿಲಾಸ್‌ಪುರಕ್ಕೆ ವಾಪಸಾಗಿದ್ದಳು. ಮಗಳ ನಡವಳಿಕೆಯಿಂದ ಅನುಮಾನಗೊಂಡ ತಾಯಿ ಪ್ರಶ್ನಿಸಿದಾಗ, ಆಕೆ ಅಳುತ್ತಲೇ ನಡೆದ ಘಟನೆಯನ್ನು ಬಾಯ್ಬಿಟ್ಟಿದ್ದಾಳೆ. ಆಘಾತಗೊಂಡ ತಾಯಿ ತಕ್ಷಣವೇ ಮಗಳನ್ನು ಕೋನಿ ಪೊಲೀಸ್ ಠಾಣೆಗೆ ಕರೆದೊಯ್ದು ಅಪರಾಧದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿಯ ಆಧಾರದ ಮೇಲೆ, ರಾಯ್‌ಪುರ ಪೊಲೀಸರು ಏವಾನ್ ಲಾಡ್ಜ್‌ಗೆ ಧಾವಿಸಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸದ್ದಾಮ್‌ನ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಹೇಳಿಕೆ
ಸದ್ದಾಮ್‌ನ ಮೊಬೈಲ್ ವಶಪಡಿಸಿಕೊಂಡಿದ್ದು, ಅದರಲ್ಲಿರುವ ಸಂಖ್ಯೆಗಳ ಮೂಲಕ ಬಿಹಾರದಲ್ಲಿರುವ ಆತನ ಕುಟುಂಬವನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿರುವುದಾಗಿ ರಾಯ್‌ಪುರ ಪೊಲೀಸರು ತಿಳಿಸಿದ್ದಾರೆ. “ಪ್ರಕರಣ ದಾಖಲಾಗಿದ್ದು, ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕಿಯನ್ನು ವಿಚಾರಣೆ ನಡೆಸಲಾಗುತ್ತಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೂಲಗಳ ಪ್ರಕಾರ, ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿದ್ದು, ಗರ್ಭಪಾತಕ್ಕೆ ನಿರಾಕರಿಸಿದ್ದಳು. ಮದುವೆಯಾಗಲು ಇಷ್ಟವಿಲ್ಲದ ಕಾರಣ ಮಗುವನ್ನು ತೆಗೆಸುವಂತೆ ಸದ್ದಾಮ್ ಒತ್ತಾಯಿಸಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಪದೇಪದೇ ಜಗಳ ನಡೆಯುತ್ತಿದ್ದು, ಅದು ಈ ಭೀಕರ ಕೃತ್ಯದಲ್ಲಿ ಅಂತ್ಯಗೊಂಡಿದೆ.
“ಇದು ತೀವ್ರ ಆವೇಶ ಮತ್ತು ಹತಾಶೆಯಿಂದ ನಡೆದ ಅಪರಾಧದಂತೆ ಕಾಣುತ್ತಿದೆ. ಇದು ಪೂರ್ವಯೋಜಿತ ಕೃತ್ಯವೇ ಅಥವಾ ಕ್ಷಣಿಕ ಆವೇಶದಲ್ಲಿ ನಡೆದಿದ್ದೇ ಎಂಬುದನ್ನು ತನಿಖೆಯಿಂದ ಖಚಿತಪಡಿಸಿಕೊಳ್ಳಲಾಗುವುದು” ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಹದಿಹರೆಯದ ಪ್ರೀತಿ, ದ್ರೋಹ ಮತ್ತು ಹಿಂಸೆಯಲ್ಲಿ ಅಂತ್ಯಗೊಂಡ ಈ ಘಟನೆ ರಾಯ್‌ಪುರ ಮತ್ತು ಬಿಲಾಸ್‌ಪುರದಲ್ಲಿ ಆತಂಕ ಸೃಷ್ಟಿಸಿದೆ.