ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ ಪದಕ ಬೇಟೆ ಮುಂದುವರೆಸಿದೆ. ಅಲ್ಲದೇ, ಶುಕ್ರವಾರ ಚಿನ್ನಕ್ಕೆ ಕೊರಳೊಡ್ಡಿದೆ.
ಕ್ರೀಡಾಕೂಟದ ಒಂಬತ್ತನೇ ದಿನ ಪುರುಷರ ಹೈಜಂಪ್-ಟಿ64 ಸ್ಪರ್ಧೆಯಲ್ಲಿ ಭಾರತದ ಪ್ರವೀಣ್ ಕುಮಾರ್ ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಈ ಮೂಲಕ ಭಾರತ 26ನೇ ಪದಕ ಗೆದ್ದಿದೆ. ಅಲ್ಲದೇ, 6ನೇ ಚಿನ್ನದ ಪದಕ ಗೆದ್ದಿದೆ. ಪ್ರವೀಣ್ ಕುಮಾರ್ ಅವರು 2.08 ಮೀಟರ್ ಎತ್ತರ ಜಿಗಿಯುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಈ ಚಿನ್ನದ ಪದಕದ ಮೂಲಕ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಭಾರತ ಇಲ್ಲಿಯವರೆಗೆ 11 ಪದಕ ಗೆದ್ದಂತಾಗಿದೆ. ಪ್ರಸಕ್ತ ಸಾಲಿನ ಪ್ಯಾರಾಲಿಂಪಿಕ್ಸ್ ನಲ್ಲಿ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಮರಿಯಪ್ಪನ್ ತಂಗವೇಲು ನಂತರ ಚಿನ್ನದ ಪದಕ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪ್ರವೀಣ್ ಪಾತ್ರರಾಗಿದ್ದಾರೆ.
ಪ್ಯಾರಾಲಿಂಪಿಕ್ಸ್ ನಲ್ಲಿ ಸತತ ಎರಡನೇ ಬಾರಿಗೆ ಪದಕ ಗೆದ್ದ ಸಾಧನೆಯನ್ನೂ ಪ್ರವೀಣ್ ಮಾಡಿದ್ದಾರೆ. 2020 ರ ಟೋಕಿಯೊ ಪ್ಯಾರಾಲಿಂಪಿಕ್ ನಲ್ಲಿ ಪ್ರವೀಣ್ ಬೆಳ್ಳಿ ಗೆದ್ದಿದ್ದರು. ಆದರೆ, ಈ ಬಾರಿ ಚಿನ್ನ ಗೆದ್ದಿದ್ದಾರೆ. 2.08 ಮೀಟರ್ ಜಿಗಿಯುವ ಮೂಲಕ ಪ್ರವೀಣ್ ಹೊಸ ಏಷ್ಯನ್ ದಾಖಲೆ ನಿರ್ಮಿಸಿದ್ದಾರೆ.
ಈ ಪದಕದ ಗೆಲುವಿನೊಂದಿಗೆ ಭಾರತ 14ನೇ ಸ್ಥಾನಕ್ಕೆ ಜಿಗಿದಿದೆ. ಈ ಸ್ಪರ್ಧೆಯಲ್ಲಿ ಅಮೆರಿಕದ ಡೆರೆಕ್ ಲೊಸಿಡೆಂಟ್ (2.06 ಮೀ) ಬೆಳ್ಳಿ ಪದಕ ಗೆದ್ದರೆ, ಇಬ್ಬರು ಆಟಗಾರರು ಕಂಚಿನ ಪದಕ ಗೆದ್ದರು. ಉಜ್ಬೇಕಿಸ್ತಾನ್ ದ ತೈಮುರ್ ಬೆಕ್ ಗಿಯಾಜೊವ್ ಮತ್ತು ಪೋಲೆಂಡ್ ನ ಮಸಿಯೆಜ್ ಲೆಪಿಯಾಟೊ ಜಂಟಿಯಾಗಿ 2.03 ಮೀಟರ್ ಜಿಗಿದು ಕಂಚು ಗೆದ್ದರು.
ಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದರೂ ಪ್ರವೀಣ್ ಕುಮಾರ್ ಚಿನ್ನ ಗೆದ್ದಿದ್ದು ವಿಶೇಷವಾಗಿದೆ. 2021 ರ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಪ್ರವೀಣ್ 2023 ರಲ್ಲಿ ಹ್ಯಾಂಗ್ಝೌ ಪ್ಯಾರಾ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಈ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ ಇತಿಹಾಸ ಬರೆದಿದೆ. ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತ 5 ಚಿನ್ನದ ಪದಕಗಳೊಂದಿಗೆ ಒಟ್ಟು 19 ಪದಕಗಳನ್ನು ಗೆದ್ದಿತ್ತು. ಈ ಬಾರಿಯ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ ಇಲ್ಲಿಯವರೆಗೆ 26 ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.