ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲ ಜೈಲು ಪಾಲಾಗಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಈಗ ಸೀರೆ ಸಂಕಷ್ಟ ಶುರುವಾಗಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ವಿಶೇಷ ತನಿಖಾ ತಂಡ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದು, ಅದರಲ್ಲಿ ಏನೇನು ಉಲ್ಲೇಖವಾಗಿದೆ ಎಂಬುವುದು ಈಗ ಬಹಿರಂಗವಾಗುತ್ತಿದೆ. 1632 ಪುಟಗಳ ಚಾರ್ಜ್ ಶೀಟ್ ನಲ್ಲಿ 113 ಸಾಕ್ಷಿಗಳನ್ನು ಎಸ್ ಐಟಿ ಉಲ್ಲೇಖಿಸಿದೆ. ಚಾರ್ಜ್ ಶೀಟ್ ನಲ್ಲಿ ಪ್ರಜ್ವಲ್ ದೌರ್ಜನ್ಯವನ್ನು ಉಲ್ಲೇಖಿಸಲಾಗಿದೆ.
ಸದ್ಯ ಈಗ ಆತನಿಗೆ ಸಂತ್ರಸ್ತೆಯ ಸೀರೆ ಸಂಕಷ್ಟ ತಂದಿದೆ. ಸಂತ್ರಸ್ತೆಯರ ಸೀರೆಯಲ್ಲಿ ವೀರ್ಯ ಮತ್ತು ಕೂದಲು ಪತ್ತೆಯಾಗಿದೆ. ಸೀರೆಯಲ್ಲಿ ಪತ್ತೆಯಾಗಿರುವ ವೀರ್ಯ ಯಾರದ್ದು? ಅತ್ಯಾಚಾರ ಸಂದರ್ಭದಲ್ಲಿ ವೀರ್ಯ ಸೀರೆ ಮೇಲೆ ಬಿದ್ದಿತ್ತೇ ಎಂಬುವುದಕ್ಕಾಗಿ ಪ್ರಜ್ವಲ್ ಡಿಎನ್ಎ ಪರೀಕ್ಷೆ ನಡೆಸಲು ನೀಡಲಾಗಿದ್ದು, ಎಫ್ಎಸ್ಎಲ್ನಿಂದ ಡಿಎನ್ಎ ವರದಿಗಾಗಿ ಕಾಯಲಾಗುತ್ತಿದೆ. ಒಂದು ವೇಳೆ ವೀರ್ಯ ಪ್ರಜ್ವಲ್ ನದ್ದು ಎಂಬುವುದು ಸಾಬೀತಾದರೆ, ಶಿಕ್ಷೆ ತಪ್ಪಿದ್ದಲ್ಲ.
ಬನ್ನಿಕೋಡ ತೋಟದ ಮನೆಯಲ್ಲಿ ಕುಡಿಯಲು ನೀರು ತೆಗೆದುಕೊಂಡು ಬಾ ಎಂದು ಹೇಳಿದ್ದ ಪ್ರಜ್ವಲ್, ಮಹಿಳೆ ನೀರು ತೆಗೆದುಕೊಂಡು ಕೊಠಡಿ ಒಳಗೆ ಹೋಗುತ್ತಿದ್ದಂತೆ ಬಾಗಿಲ ಚಿಲಕ ಹಾಕಿದ್ದಾನೆ. ನಂತರ, ಮಹಿಳೆ ಬಾಗಿಲು ತೆಗೆಯಣ್ಣ ಎಂದು ಗೋಗರೆದರೂ ಬಿಡದೆ ದೌರ್ಜನ್ಯ ಎಸಗಿದ್ದಾನೆ. ‘ಸೀರೆ ಮತ್ತು ಬ್ಲೌಸ್ ತೆಗೆಯೆಂದು ಬಲವಂತ ಮಾಡಿ ದೌರ್ಜನ್ಯ ಎಸಗಿದ್ದಾನೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಬಲವಂತವಾಗಿ ಅತ್ಯಾಚಾರ ಮಾಡಿದ್ದಲ್ಲದೇ, ವಿಡಿಯೋ ಮಾಡಿಕೊಂಡಿದ್ದಾನೆ. ಇದಾದ ಬಳಿಕ ಬಸವನಗುಡಿಯ ಮನೆ ಕ್ಲೀನ್ ಗೆ ಬಂದಾಗ ಸಹ ಇದೇ ರೀತಿಯ ವರ್ತನೆ ತೋರಿದ್ದ. ಬಟ್ಟೆ ಒಗೆಯಲು ತೆಗೆದುಕೊಂಡು ಹೋಗು ಎಂದು ಕೊಠಡಿಗೆ ಕರೆದಿದ್ದ ಪ್ರಜ್ವಲ್, ಮಹಿಳೆ ಕೊಠಡಿಯೊಳಕ್ಕೆ ಹೋಗಲು ಹಿಂಜರಿದಾಗ ಗದರಿದ್ದ. ರೂಂ ಒಳಗೆ ಹೋಗುತ್ತಿದ್ದಂತೆ ಚಿಲಕ ಹಾಕಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾಗಿ ಮಹಿಳೆ ದೂರಿನಲ್ಲಿ ಹೇಳಿದ್ದಾರೆ. ಈ ವಿಷಯವನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ನಂತರ ಈ ವಿಚಾರವನ್ನು ಬಾಯಿಬಿಟ್ಟರೆ ವೀಡಿಯೊವನ್ನು ನಿನ್ನ ಮಗನಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿ ಬ್ಲ್ಯಾಕ್ಮೇಲ್ ಮಾಡಿದ್ದ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಈ ವೇಳೆ ಮಹಿಳೆ, ನಿನ್ನ ತಾತ, ತಂದೆಗೆ ಊಟ ಹಾಕಿದ್ದೀನಿ. ದಯಮಾಡಿ ಬಿಟ್ಟುಬಿಡಪ್ಪ’ ಎಂದು ಮಹಿಳೆ ಗೋಗರೆದರೂ ಆತ ಬಿಡದೆ ಅತ್ಯಾಚಾರ ನಡೆಸಿದ್ದಾನೆ ಎಂದು ಉಲ್ಲೇಖಿಸಲಾಗಿದೆ.