ಬೆಂಗಳೂರು : ಸರ್ಕಾರಿ ನೌಕರರು, ಖಾಸಗಿ ಉದ್ಯೋಗಿಗಳಿಗೆ (ಇಪಿಎಫ್ಒ) ನಿವೃತ್ತಿ ಬಳಿಕ ಪಿಂಚಣಿ ದೊರೆಯುತ್ತದೆ. ಆದರೆ, ಅಸಂಘಟಿತ ವಲಯದ ನೌಕರರಿಗೆ ಪಿಂಚಣಿ, ವಿಮೆ, ಪಿಎಫ್ ಸೇರಿ ಯಾವುದೇ ಸೌಲಭ್ಯಗಳು ಇರುವುದಿಲ್ಲ. ಹಾಗಾಗಿಯೇ, ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ (PM-SYM) ಯೋಜನೆಯ ಜಾರಿಗೆ ತಂದಿದೆ. ಇದು ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ನೀಡುವ ಮಹತ್ವದ ಯೋಜನೆಯಾಗಿದೆ
ಮನೆಗೆಲಸದವರು, ಬೀದಿ ಬದಿ ವ್ಯಾಪಾರಿಗಳು, ಮಧ್ಯಾಹ್ನದ ಬಿಸಿಯೂಟದ ಕಾರ್ಯಕರ್ತರು, ಕಟ್ಟಡ ಕಾರ್ಮಿಕರು, ಹಮಾಲಿಗಳು, ರಾಗ್ ಪಿಕರ್ಸ್, ಆಟೋ ಚಾಲಕರು ಸೇರಿ ಅಸಂಘಟಿತ ವಲಯದ ಕಾರ್ಮಿಕರು ತಿಂಗಳಿಗೆ 100 ರೂಪಾಯಿ ಪಾವತಿಸಿದರೆ, ಅವರಿಗೆ 60 ವರ್ಷದ ಬಳಿಕ ಮಾಸಿಕ 3 ಸಾವಿರ ರೂಪಾಯಿ ಪಿಂಚಣಿ ದೊರೆಯುತ್ತದೆ.
18 ರಿಂದ 40 ವರ್ಷದೊಳಗಿನವರು ಯೋಜನೆಗೆ ಅರ್ಜಿ ಸಲ್ಲಿಸಬಹುದು. ಇವರ ಮಾಸಿಕ ಆದಾಯವು 15 ಸಾವಿರ ರೂಪಾಯಿಗಿಂತ ಕಡಿಮೆ ಇರಬೇಕು. ಇಪಿಎಫ್, ಇಎಸ್ಐಸಿ ಹಾಗೂ ಎನ್ ಪಿಎಸ್ ಸದಸ್ಯರಾಗಿರಬಾರದು ಎಂದು ತಿಳಿಸಲಾಗಿದೆ. ಮಾಸಿಕ 55 ರೂಪಾಯಿಯಿಂದ 200 ರೂಪಾಯಿವರೆಗೆ ಪಾವತಿಸಬೇಕು. 60 ವರ್ಷ ತುಂಬಿದ ನಂತರ ಪ್ರತಿ ತಿಂಗಳು ₹3,000 ಪಿಂಚಣಿ ಸಿಗುತ್ತದೆ.
ಯೋಜನೆಯ ಫಲಾನುಭವಿಯು ಮರಣ ಹೊಂದಿದರೆ, ಅವರ ಸಂಗಾತಿಗೆ (ಪತಿ ಅಥವಾ ಪತ್ನಿ) ಪಿಂಚಣಿಯ ಶೇ.50 ರಷ್ಟು (1,500 ರೂಪಾಯಿ) ಹಣ ಸಿಗುತ್ತದೆ. ಮಹತ್ವದ ಸಂಗತಿ ಎಂದರೆ, ನೀವು ಎಷ್ಟು ಹಣವನ್ನು ಪಾವತಿಸುತ್ತೀರೋ, ಅಷ್ಟೇ ಮೊತ್ತದ ಹಣವನ್ನು ಕೇಂದ್ರ ಸರ್ಕಾರವು ನಿಮ್ಮ ಖಾತೆಗೆ ಜಮಾ ಮಾಡುತ್ತದೆ. 18 ವರ್ಷದವರು ತಿಂಗಳಿಗೆ 55 ರೂ., 29 ವರ್ಷದವರು ಮಾಸಿಕ 100 ರೂ. ಹಾಗೂ 40 ವರ್ಷದವರು ತಿಂಗಳಿಗೆ 200 ರೂ. ಕಟ್ಟಿದರೆ ಸಾಕು. ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಬಹುದು. https://maandhan.in/ ವೆಬ್ ಸೈಟ್ ಗೆ ಭೇಟಿ ನೀಡಿಯೂ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ : ಏಪ್ರಿಲ್ 17ರಂದು ಮಂಡ್ಯದಲ್ಲಿ ‘ಮಹಾ ಜನ್ ಸುನ್ವಾಯಿ’ ಕಾರ್ಯಕ್ರಮ!



















