ಬೆಂಗಳೂರು: ಜಾಗತಿಕ ಭೌಗೋಳಿಕ ಸಂಘರ್ಷ, ಅಮೆರಿಕದ ಸುಂಕದ ಸಮರ ಸೇರಿ ಹಲವು ಕಾರಣಗಳಿಂದಾಗಿ ಭಾರತದ ಷೇರು ಮಾರುಕಟ್ಟೆಯಲ್ಲಿ ಏರಿಳಿತಗಳು ಉಂಟಾಗುತ್ತಿವೆ. ಹಾಗಾಗಿ, ಹೆಚ್ಚಿನ ಜನ ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಿಲ್ಲ. ಆದರೆ, ಸುರಕ್ಷಿತವಾದ ಹೂಡಿಕೆ ಯೋಜನೆ ಬೇಕು ಅಂದರೆ, ಪೋಸ್ಟ್ ಆಫೀಸಿನ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಯೋಜನೆಯು ಉತ್ತಮವಾಗಿದೆ.
ಹೌದು, ಪೋಸ್ಟ್ ಆಫೀಸಿನ ಪಿಪಿಎಫ್ ಯೋಜನೆಯು ಹೆಚ್ಚು ಜನಪ್ರಿಯವಾಗಿದೆ. ಬೇರೆ ಬ್ಯಾಂಕ್ ಗಳಲ್ಲಿ ಕೂಡ ಇದನ್ನು ತೆರೆಯಬಹುದು. ಪೋಸ್ಟ್ ಆಫೀಸ್ ನಲ್ಲಿ ನೀವು 15 ವರ್ಷಗಳವರೆಗೆ ಪ್ರತಿ ವರ್ಷ 50 ಸಾವಿರ ರೂ. ಹೂಡಿಕೆ ಮಾಡಿದರೆ, 6 ಲಕ್ಷ ರೂಪಾಯಿ ಬಡ್ಡಿಯ ಲಾಭವನ್ನೇ ಪಡೆಯಬಹುದಾಗಿದೆ.
ಪಿಪಿಎಫ್ ಹೂಡಿಕೆ ಬಗ್ಗೆ ನಿಮಗೆ ಉದಾಹರಣೆ ಸಮೇತವೇ ವಿವರಿಸುತ್ತೇವೆ ನೋಡಿ. ನೀವು ಪ್ರತಿ ವರ್ಷ ನಿಮ್ಮ ಪಿಪಿಎಫ್ ಖಾತೆಯಲ್ಲಿ 50,000 ರೂ. ಠೇವಣಿ ಇಟ್ಟರೆ, 15 ವರ್ಷಗಳ ನಂತರ ಅಂದರೆ ಮುಕ್ತಾಯದ ನಂತರ, ನಿಮಗೆ ಒಟ್ಟು 13,56,070 ರೂ. ಸಿಗುತ್ತದೆ. ಇದರಲ್ಲಿ ನಿಮ್ಮ ಹೂಡಿಕೆಯ ಮೊತ್ತ 7,50,000 ರೂ. ಅದರೆ, ಬಡ್ಡಿಯ ಲಾಭವೇ 6,06,070 ರೂ. ಆಗಿರುತ್ತದೆ.
ಪಿಪಿಎಫ್ ಖಾತೆ ತೆರೆಯುವ ಜತೆಗೆ ಅದನ್ನು ನಿರ್ವಹಿಸುವುದು ಕೂಡ ಪ್ರಮುಖ ಸಂಗತಿಯಾಗಿದೆ. ನೀವು ಒಂದು ವರ್ಷದಲ್ಲಿ ಕನಿಷ್ಠ 500 ರೂ. ಠೇವಣಿ ಇಡದಿದ್ದರೆ, ನಿಮ್ಮ ಖಾತೆಯನ್ನ ಕ್ಲೋಸ್ ಮಾಡಲಾಗುತ್ತದೆ. ಆದರೆ ದಂಡ ಪಾವತಿಸುವ ಮೂಲಕ ಅದನ್ನು ಮತ್ತೆ ಸಕ್ರಿಯಗೊಳಿಸಬಹುದು. ಹಾಗೆಯೇ, ಪಿಪಿಎಫ್ ಖಾತೆ ತೆರೆದ ನಂತರ ನೀವು 5 ವರ್ಷಗಳ ಮೊದಲು ಹಣ ಹಿಂಪಡೆಯಲು ಸಾಧ್ಯವಿಲ್ಲ. 5 ವರ್ಷಗಳ ನಂತರ ಗಂಭೀರ ಅನಾರೋಗ್ಯ, ಮಕ್ಕಳ ಶಿಕ್ಷಣದಂತಹ ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಪಿಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡಬಹುದು.