ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಸಾಧನೆ ಮಾಡಲಿದೆ ಎಂಬುದಾಗಿ ಬಹುತೇಕ ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ಹೀಗಾಗಿ 27 ವರ್ಷಗಳ ಬಳಿಕ ಬಿಜೆಪಿ ದೆಹಲಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ದೆಹಲಿಯಲ್ಲಿ ಅಧಿಕಾರ ಹಿಡಿಯಲು ಒಟ್ಟು 70ರಲ್ಲಿ 36 ಸ್ಥಾನಗಳು ಸಾಕು.
ಚಾಣಕ್ಯ ಸ್ಟ್ರಾಟಜಿಸ್, ಜೆವಿಸಿ, ಪೋಲ್ ಡೈರಿ, ಪಿ-ಮಾರ್ಕ್, ಪೀಪಲ್ಸ್ ಇನ್‌ಸೈಟ್ ಮತ್ತು ಪೀಪಲ್ಸ್ ಪಲ್ಸ್ ಎಂಬ ಆರು ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಗೆಲ್ಲುತ್ತದೆ ಎಂದು ನಿರೀಕ್ಷಿಸಿವೆ. ಪೋಲ್ ಆಫ್ ಪೋಲ್ ಪ್ರಕಾರ ಬಿಜೆಪಿ 44 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ಆಪ್ 24 ಕ್ಷೇತ್ರಗಳನ್ನು ತಮ್ಮದಾಗಿಸಿಕೊಳ್ಳಲಿದೆ. ತ್ರಿಕೋನ ಸ್ಪರ್ಧೆ ಎಂದು ಹೇಳಿಕೊಂಡರೂ ಕಾಂಗ್ರೆಸ್ ಕೇವಲ ಒಂದು ಸ್ಥಾನಕ್ಕೆ ತೃಪ್ತಿ ಪಡಬೇಕಾಗುತ್ತದೆ.
ಎಷ್ಟು ಸೀಟುಗಳು?
ಪಿ-ಮಾರ್ಕ್ ಚುನಾವಣೋತ್ತರ ಸಮೀಕ್ಷೆಯು ಬಿಜೆಪಿಗೆ 31ರಿಂದ 39, ಎಎಪಿಗೆ 21-31 ಮತ್ತು ಕಾಂಗ್ರೆಸ್‌ಗೆ 0-1 ಸ್ಥಾನಗಳನ್ನು ನೀಡಿದೆ. ಪೀಪಲ್ಸ್ ಪಲ್ಸ್ , ಬಿಜೆಪಿಗೆ 51-60 ಸ್ಥಾನಗಳು ಮತ್ತು ಎಎಪಿಗೆ 10-19 ಸ್ಥಾನಗಳು ಸಿಗಲಿವೆ ಎಂದು ಹೇಳಿದೆ.
ಚಾಣಾಕ್ಯ ಸ್ಟ್ರಾಟಜೀಸ್ ಬಿಜೆಪಿಗೆ 39ರಿಂದ 44, ಆಪ್‌ಗೆ 25ರಿಂದ 28, ಕಾಂಗ್ರೆಸ್‌ಗೆ 2ರಿಂದ 3 ಸೀಟುಗಳನ್ನು ನೀಡಿದೆ. ಜೆವಿಸಿ ಬಿಜೆಪಿಗೆ 39ರಿಂದ 45, ಆಪ್‌ಗೆ 22ರಿಂದ 31, ಕಾಂಗ್ರೆಸ್‌ಗೆ 2 ಸೀಟುಗಳನ್ನು ಕೊಟ್ಟಿದೆ. ಮ್ಯಾಟ್ರಿಜ್ ಸಂಸ್ಥೆಯ ಸಮೀಕ್ಷೆಯಲ್ಲಿ ಬಿಜೆಪಿಗೆ 35ರಿಂದ 40, ಆಪ್‌ಗೆ 32ರಿಂದ 37 ಸೀಟುಗಳನ್ನು ನೀಡಲಾಗಿದೆ. ಪಿ ಮಾರ್ಕ್ ಸಂಸ್ಥೆಯು ಬಿಜೆಪಿಗೆ 39ರಿಂದ 39 ಹಾಗೂ ಆಪ್‌ಗೆ 21ರಿಂದ 31 ಹಾಗೂ ಕಾಂಗ್ರೆಸ್‌ಗೆ 1 ಸೀಟ್ ಕೊಟ್ಟಿದೆ.
ಪೀಪಲ್ಸ್ ಇನ್ಸೈಟ್ ಚುನಾವಣೋತ್ತರ ಸಮೀಕ್ಷೆಯು ಬಿಜೆಪಿಗೇ ಮುನ್ನಡೆ ನೀಡಿದೆ. ಎಎಪಿಗೆ 25-29, ಬಿಜೆಪಿ: 40-44 ಹಾಗೂ ಕಾಂಗ್ರೆಸ್: 0-2 ಸೀಟ್‌ಗಳನ್ನು ನೀಡಿದೆ.
ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಬುಧವಾರ (ಫೆಬ್ರವರಿ 5) ಸಂಜೆ 6 ಗಂಟೆಗೆ ಮುಕ್ತಾಯಗೊಂಡಿದ್ದು, ಸಂಜೆ 5 ಗಂಟೆಯವರೆಗೆ 70 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 57.7 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ದಾಖಲಿಸಿದೆ.
ಹಿಂದಿನ ಚುನಾವಣೆಯ ಸಮೀಕ್ಷೆಗಳು ಏನಾಗಿದ್ದವು?
ಹಿಂದಿನ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ, ಎಕ್ಸಿಟ್ ಪೋಲ್‌ಗಳು ಮುನ್ಸೂಚನೆ ನೀಡಿದ ಫಲಿತಾಂಶಗಳು ಹಿಂದುಮೊದಲು ನಿಜವಾಗಿದ್ದವು. ಉದಾಹರಣೆಗೆ, 2015 ಮತ್ತು 2020ರ ಚುನಾವಣೆಯಲ್ಲಿ ಎಕ್ಸಿಟ್ ಪೋಲ್‌ಗಳು ಆಮ್ ಆದ್ಮಿ ಪಕ್ಷ (AAP) ಗೆಲುವು ಸಾಧಿಸುವ ಬಗ್ಗೆ ಮುನ್ಸೂಚನೆ ನೀಡಿದ್ದವು, ಮತ್ತು ನಿಜವಾದ ಗೆಲುವಿನ ಅಂತರ ಇನ್ನೂ ಹೆಚ್ಚಿನದಾಗಿತ್ತು.
ಎಕ್ಸಿಟ್ ಪೋಲ್‌ಗಳು ಚುನಾವಣಾ ಪ್ರವೃತ್ತಿಗಳನ್ನು ಮುಂಚಿತವಾಗಿ ನಿರ್ಧರಿಸಲು ಸಹಾಯ ಮಾಡಬಹುದು, ಆದರೆ ಅವು ಸದಾ ನಿಖರವಾಗಿರುತ್ತವೆ ಎಂಬುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.