ರೋಮ್: ಶ್ವಾಸಕೋಶದ ಸೋಂಕಿಗೆ ತುತ್ತಾಗಿ ಕಳೆದೊಂದು ವಾರದಿಂದ ರೋಮ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವ್ಯಾಟಿಕನ್ ತಿಳಿಸಿದೆ.
ದೀರ್ಘಕಾಲದಿಂದ ಅಸ್ತಮಾದಿಂದ ಬಳಲುತ್ತಿರುವ 88 ವರ್ಷ ವಯಸ್ಸಿನ ಪೋಪ್ ಫ್ರಾನ್ಸಿಸ್ ಅವರಿಗೆ ವಿವಿಧ ರೀತಿಯ ಪರೀಕ್ಷೆಗಳನ್ನು ನಡೆಸಲಾಗಿದ್ದು, ಶನಿವಾರ ರಕ್ತಹೀನತೆಗೆ ಸಂಬಂಧಿಸಿದ ಸಮಸ್ಯೆಯೂ ಗೋಚರಿಸಿದೆ. ಈ ಹಿನ್ನೆಲೆಯಲ್ಲಿ ಅವರ ದೇಹಕ್ಕೆ ರಕ್ತದ ಮರುಪೂರಣವನ್ನೂ ನಡೆಸಲಾಯಿತು. ಆದರೆ, ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿಲ್ಲ. ಅವರ ಸ್ಥಿತಿ ಚಿಂತಾಜನಕವಾಗಿ ಎಂದು ವ್ಯಾಟಿಕನ್ ಮಾಹಿತಿ ನೀಡಿದೆ.
“ಪೋಪ್ ಫ್ರಾನ್ಸಿಸ್ ಅವರು ಬಹಳಷ್ಟು ನೋವಿನಿಂದ ಬಳಲುತ್ತಿದ್ದಾರೆ. ಆದರೂ ಅವರು ಅಲರ್ಟ್ ಆಗಿರಲು ಪ್ರಯತ್ನಿಸಿ, ಕುರ್ಚಿಯಲ್ಲಿ ಕೆಲ ಹೊತ್ತು ಕುಳಿತುಕೊಳ್ಳಲು ಯತ್ನಿಸಿದರು” ಎಂದು ವ್ಯಾಟಿಕನ್ ಪ್ರಕಟಣೆ ತಿಳಿಸಿದೆ.
ಶ್ವಾಸಕೋಶದ ತೀವ್ರ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಪೋಪ್ ಫ್ರಾನ್ಸಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರಂಭದಲ್ಲಿ ಅವರಿಗೆ ಶ್ವಾಸಕೋಶದ ಸೋಂಕು ಕಾಣಿಸಿಕೊಂಡು, ಸಂಕೀರ್ಣ ಉಸಿರಾಟದ ತೊಂದರೆಗೆ ಒಳಗಾಗಿದ್ದರು. ನಂತರದಲ್ಲಿ ಡಬಲ್ ನ್ಯುಮೋನಿಯಾ ಕೂಡ ಆವರಿಸಿಕೊಂಡಿತ್ತು. ಹೀಗಾಗಿ ಶ್ವಾಸಕೋಶದ ಉರಿಯೂತದಂಥ ಸಮಸ್ಯೆಯೂ ಅವರನ್ನು ಕಾಡತೊಡಗಿದೆ ಎಂದು ವೈದ್ಯರು ಹೇಳಿದ್ದರು. ಪೋಪ್ ಫ್ರಾನ್ಸಿಸ್ ಅವರಿಗೆ ನ್ಯುಮೋನಿಯಾ ಇರುವ ಕಾರಣ, ಅದು ತೀವ್ರಗೊಂಡರೆ ಸೆಪ್ಸಿಸ್ ಅಂದರೆ ರಕ್ತದ ಸೋಂಕು ಸಂಭವಿಸುವ ಅಪಾಯವಿದೆ ಎಂದೂ ವೈದ್ಯರು ಎಚ್ಚರಿಸಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ದಾಖಲಾಗಿರುವ ರೋಮ್‌ನ ಗೆಮೆಲ್ಲಿ ಆಸ್ಪತ್ರೆಯ ಔಷಧ ಮತ್ತು ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ.ಸೆರ್ಗಿಯೋ ಆಲ್ಫೀರಿ, “ಈಗಾಗಲೇ ಪೋಪ್ ಅವರು ಉಸಿರಾಟದ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಜೊತೆಗೆ ಅವರಿಗೆ ವಯಸ್ಸಾಗಿದೆ. ಹೀಗಾಗಿ, ಸೆಪ್ಸಿಸ್ ಏನಾದರೂ ಉಂಟಾದರೆ, ಅವರು ಅದರಿಂದ ಹೊರಬರುವುದು ನಿಜವಾಗಿಯೂ ಕಷ್ಟ” ಎಂದಿದ್ದಾರೆ.