ವಿಶ್ವದ ಕ್ಯಾಥೊಲಿಕ್ ಸಮುದಾಯದ ಪರಮೋಚ್ಚ ನಾಯಕ, ಪೋಪ್ ಫ್ರಾನ್ಸಿಸ್ (88) ಅವರು ಏಪ್ರಿಲ್ 21ರಂದು ವ್ಯಾಟಿಕನ್‌ನ ಕಾಸಾ ಸಾಂತಾ ಮಾರ್ಟಾ ನಿವಾಸದಲ್ಲಿ ನಿಧನರಾದರು. ಈ ಸುದ್ದಿಯನ್ನು ವ್ಯಾಟಿಕನ್‌ನ ಕ್ಯಾಮರ್‌ಲೆಂಗೊ ಕಾರ್ಡಿನಲ್ ಕೆವಿನ್ ಫೆರೆಲ್ ಅವರು ವಿಡಿಯೋ ಹೇಳಿಕೆಯ ಮೂಲಕ ದೃಢಪಡಿಸಿದ್ದಾರೆ. “ಇಂದು ಬೆಳಿಗ್ಗೆ 7.35ಕ್ಕೆ ರೋಮ್‌ನ ಬಿಷಪ್ ಫ್ರಾನ್ಸಿಸ್ ಅವರು ನಿರ್ಗಮಿಸಿದರು. ಅವರ ಸಂಪೂರ್ಣ ಜೀವನವು ಕ್ರಿಸ್ತನ ಸೇವೆಗೆ ಮತ್ತು ಅವರ ಚರ್ಚ್‌ಗೆ ಸಮರ್ಪಿತವಾಗಿತ್ತು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪೋಪ್ ಫ್ರಾನ್ಸಿಸ್ ಅವರ ಜನ್ಮನಾಮ ಜಾರ್ಜ್ ಮಾರಿಯೊ ಬೆರ್ಗೊಗ್ಲಿಯೊ, ಅವರು 2013ರ ಮಾರ್ಚ್ 13ರಂದು 266ನೇ ಪೋಪ್ ಆಗಿ ಆಯ್ಕೆಯಾಗಿದ್ದರು. ಲ್ಯಾಟಿನ್ ಅಮೆರಿಕಾದಿಂದ ಬಂದ ಮೊದಲ ಪೋಪ್ ಮತ್ತು ಜೆಸ್ಯೂಟ್ ಆದೇಶದ ಮೊದಲ ಪೋಪ್ ಎಂಬ ಐತಿಹಾಸಿಕ ಸಾಧನೆ ಅವರದ್ದಾಗಿದೆ.
ಫ್ರಾನ್ಸಿಸ್ ಅವರು ತಮ್ಮ ಸರಳತೆಗೆ ಹೆಸರಾಗಿದ್ದರು. ಅವರು ಪೋಪ್ಗಳಿಗೆ ಮೀಸಲಾಗಿರುವ ಐಷಾರಾಮಿ ಪಾಪಲ್ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸಲು ನಿರಾಕರಿಸಿ, ವ್ಯಾಟಿಕನ್‌ನ ಕಾಸಾ ಸಾಂತಾ ಮಾರ್ಟಾ ಗೆಸ್ಟ್‌ಹೌಸ್‌ನ ಎರಡು ಕೊಠಡಿಗಳ ಸೂಟ್‌ನಲ್ಲಿ ವಾಸಿಸಲು ಆರಂಭಿಸಿದ್ದರು. ಅವರು ಆಗಾಗ್ಗೆ ವ್ಯಾಟಿಕನ್‌ನಿಂದ ರಹಸ್ಯವಾಗಿ ಹೊರಗೆ ಹೋಗುವ ಮೂಲಕ ಸರಳತೆ ಮರೆದಿದ್ದರು.
ಆರೋಗ್ಯ ಸವಾಲುಗಳು
ಪೋಪ್ ಫ್ರಾನ್ಸಿಸ್ ಅವರು ತಮ್ಮ ಪೋಪ್ ಅಧಿಕಾರದ ಕೊನೆಯ ದಿನಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದರು. ಫೆಬ್ರವರಿ 2025ರಲ್ಲಿ ಅವರಿಗೆ ಬ್ರಾಂಕೈಟಿಸ್ ಪತ್ತೆಯಾಗಿತ್ತು. ಫೆಬ್ರವರಿ 14 ರಂದು ಎದೆಯ ನೋವಿನಿಂದ ರೋಮ್‌ನ ಗೆಮೆಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ, ಅವರಿಗೆ ಎರಡೂ ಶ್ವಾಸಕೋಶಗಳಲ್ಲಿ ನ್ಯುಮೋನಿಯಾದ “ಪಾಲಿಮೈಕ್ರೊಬಿಯಲ್ ಇನ್‌ಫೆಕ್ಷನ್” ಇದೆ ಎಂದು ದೃಢಪಟ್ಟಿತ್ತು. ಕೆಲವು ವರದಿಗಳ ಪ್ರಕಾರ, ಅವರು ಶ್ವಾಸಕೋಶದ ಕ್ಯಾನ್ಸರ್‌ನಿಂದಲೂ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಈಸ್ಟರ್ ಭಾನುವಾರ (ಏಪ್ರಿಲ್ 20, 2025) ರಂದು ಅವರು ಸೇಂಟ್ ಪೀಟರ್ಸ್ ಸ್ಕ್ವೇರ್‌ನಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಆಶೀರ್ವಾದ ನೀಡಿದ್ದರು. ಆದರೆ ಸಭೆಯ ನೇತೃತ್ವವನ್ನು ಕಾರ್ಡಿನಲ್ ಆಂಜೆಲೊ ಕೊಮಾಸ್ಟ್ರಿಗೆ ವಹಿಸಿದ್ದರು.
ನಿಧನದ ಘೋಷಣೆ ಮತ್ತು ಶೋಕಾಚರಣೆ
ಪೋಪ್ ಫ್ರಾನ್ಸಿಸ್ ನಿಧನದ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಶೋಕಾಚರಣೆ ನಡೆಸಲಾಗುತ್ತಿದೆ. ಈ ಅವಧಿಯಲ್ಲಿ, ಕಾರ್ಡಿನಲ್‌ಗಳ ಕಾನ್‌ಕ್ಲೇವ್ ಮುಂದಿನ ಪೋಪ್‌ನ ಆಯ್ಕೆಗಾಗಿ ಸಿದ್ಧತೆ ನಡೆಸಲಿದೆ. ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯನ್ನು ಕಾರ್ಡಿನಲ್ ಜಿಯೋವನ್ನಿ ಬಟ್ಟಿಸ್ಟಾ ರೀ, ಕಾಲೇಜ್ ಆಫ್ ಕಾರ್ಡಿನಲ್ಸ್‌ನ ಡೀನ್ ನೇತೃತ್ವ ವಹಿಸಲಿದ್ದಾರೆ.
ದೀನದಲಿತರಿಗೆ ಪೋಪ್ ಭರವಸೆಯ ಬೆಳಕು
ಪೋಪ್ ಫ್ರಾನ್ಸಿಸ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ‘ಪೋಪ್ ಫ್ರಾನ್ಸಿಸ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಈ ಸಂದರ್ಭದಲ್ಲಿ, ಜಾಗತಿಕ ಕ್ಯಾಥೋಲಿಕ್ ಸಮುದಾಯಕ್ಕೆ ನನ್ನ ಸಂತಾಪಗಳು’ ಎಂದು ಪ್ರಧಾನಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ‘ಪೋಪ್ ಫ್ರಾನ್ಸಿಸ್ ಅವರನ್ನು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಯಾವಾಗಲೂ ಕರುಣೆ, ನಮ್ರತೆ ಮತ್ತು ಆಧ್ಯಾತ್ಮಿಕ ಚೈತನ್ಯದ ಸಂಕೇತವಾಗಿ ಸ್ಮರಿಸುತ್ತಾರೆ. ಚಿಕ್ಕ ವಯಸ್ಸಿನಿಂದಲೂ, ಅವರು ಕ್ರಿಸ್ತನ ಆದರ್ಶಗಳನ್ನು ಅರಿತುಕೊಳ್ಳಲು ತಮ್ಮನ್ನು ತಾವು ಅರ್ಪಿಸಿಕೊಂಡರು. ಶ್ರದ್ಧೆಯಿಂದ ಬಡವರು ಮತ್ತು ದೀನದಲಿತರ ಸೇವೆ ಮಾಡಿದರು. ಅಲ್ಲದೇ ಅವರಿಗೆ ಭರವಸೆಯ ಬೆಳಕಾಗಿದ್ದರು’ ಎಂದು ಪ್ರಧಾನಿ ಸ್ಮರಿಸಿದ್ದಾರೆ.


















