ಬೆಂಗಳೂರು: ಅಳಿಯ ಹಾಗೂ ಮಾವನ ಜಗಳ ಬಿಡಿಸಲು ಹೋಗಿದ್ದ ಪೊಲೀಸ್ ಪೇದೆಗೆ (Constable) ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ.
ಈ ಘಟನೆ ಚಾಮರಾಜಪೇಟೆಯ(Chamarajpet) ವಾಲ್ಮೀಕಿ ನಗರದಲ್ಲಿ ಶನಿವಾರ ನಡೆದಿದೆ. ಅಳಿಯ ತಬ್ರೇಜ್, ಮಾವ ಮೊಹಮ್ಮದ್ ಶಫೀವುಲ್ಲಾ ಮಧ್ಯೆ ಜಗಳ ನಡೆದಿತ್ತು. ತಬ್ರೇಜ್ ಪಾಷಾ ತನ್ನ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದ. ಹೀಗಾಗಿ ಶಫೀವುಲ್ಲಾ ತನ್ನ ಮಗಳಿಗೆ ಬೇರೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ಇದರಿಂದ ಸಿಟ್ಟಾದ ತಬ್ರೇಜ್ ಮತ್ತು ಈತನ ಸಂಬಂಧಿಕರು ಶಫೀವುಲ್ಲಾ ಜೊತೆ ಜಗಳ ಮಾಡಿದ್ದಾರೆ. ಈ ವೇಳೆ ಅಳಿಯ ತಬ್ರೇಜ್, ಮಾವ ಶಫೀವುಲ್ಲಾಗೆ ಬಾಟಲ್‌ನಿಂದ ತಲೆಗೆ ಹೊಡೆದಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ, ಘಟನಾ ಸ್ಥಳಕ್ಕೆ ತೆರಳಿದ್ದಾರೆ.
ಈ ಸಂದರ್ಭದಲ್ಲಿ ಆರೋಪಿ ತಬ್ರೇಜ್ ಡ್ಯಾಗರ್ ನಿಂದ ಪೊಲೀಸ್ ಪೇದೆ ಸಂತೋಷ್‌ಗೆ ಇರಿದಿದ್ದಾನೆ. ಗಾಯಗೊಂಡಿರುವ ಪೊಲೀಸ್ ಪೇದೆ ಆಸ್ಪತ್ರೆಗೆ ದಾಖಲಾಗಿದ್ದು, ಈ ಕುರಿತು ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.



















