ಗದಗ: ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಶಿಕ್ಷೆ ಪ್ರಕಟಿಸಿದೆ.
ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ (Laxmeshwar Police Station) ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ (Gadag) ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 23 ಜನರಿಗೆ ಶಿಕ್ಷೆ ಪ್ರಕಟಿಸಿದೆ.
2017 ಫೆ.5ರಂದು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ನಡೆದಿತ್ತು. ಅಕ್ರಮ ಮರಳು ಸಾಗಿಸುವ ವಾಹನ ತಡೆದು ಚಾಲಕ ಶಿವಪ್ಪ ಡೋಣಿ ಎಂಬತನನ್ನು ಪೊಲೀಸರು ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆತ ಪೊಲೀಸ್ ಠಾಣೆಯಿಂದ ಹೊರ ಬಂದ ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆತ ಸಾವನ್ನಪ್ಪಿದ್ದ. ಮೃತನ ಕುಟುಂಬಸ್ಥರು ಪೊಲೀಸ್ ಠಾಣೆಯ ಮುಂದೆ ಮೃತದೇಹವನ್ನಿಟ್ಟು ಪ್ರತಿಭಟನೆ ನಡೆಸಿದ್ದರು.
ಇದು ವಿಕೋಪಕ್ಕೆ ತೆರಳಿ ಪೊಲೀಸ್ ಠಾಣೆ ಹಾಗೂ ಕಚೇರಿಯಲ್ಲಿದ್ದ ಕಡತಗಳನ್ನು, ದಾಖಲೆಗಳನ್ನು, ಪೀಠೋಪಕರಣ, ಪೊಲೀಸ್ ಜೀಪ್ ಹಾಗೂ ಹತ್ತಾರು ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದರು. ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿದ್ದರು. ಠಾಣೆಯ ವಾಕಿಟಾಕಿ, ಕಂಪ್ಯೂಟರ್ ಸೇರಿದಂತೆ ಅನೇಕ ವಸ್ತುಗಳನ್ನು ದೋಚಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 112 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪೈಕಿ ಈಗಾಗಲೇ 8 ಜನ ಸಾವನ್ನಪ್ಪಿದ್ದಾರೆ. ಉಳಿದ 103 ಜನರ ಮೇಲೆ ತನಿಖೆ ಮುಂದುವರೆದಿತ್ತು. ಈಗ 23 ಜನರಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ. ಆರೋಪಿಗಳಿಗೆ ಯಾವೆಲ್ಲಾ ಶಿಕ್ಷೆ ವಿಧಿಸಿದೆ. ಶಿಕ್ಷೆ ಪ್ರಮಾಣ ಏಷ್ಟು ಎಂಬುದು ಮಾ. 24ರಂದು ಗೊತ್ತಾಗಲಿದೆ. 80 ಜನರು ನಿರಪರಾಧಿಗಳೆಂದು ಕೋರ್ಟ್ ಘೋಷಿಸಿದೆ.