ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿರುವ ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ದೂರುದಾರನ ಹೇಳಿಕೆ ದಾಖಲು ಬೆನ್ನಲ್ಲೇ ಇದೀಗ ಬೆಳ್ತಂಗಡಿ ಪೊಲೀಸರು ಅಸ್ಥಿಪಂಜರಗಳ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರಿನಲ್ಲಿ ಹೇಳಲಾಗಿರುವಂತೆ ಹೂತು ಹಾಕಿದ್ದ ಅಸ್ಥಿಪಂಜರವೊಂದನ್ನು ಸಾಕ್ಷಿಯಾಗಿ ಹೊರತೆಗೆಯಲಾಗಿದ್ದು, ಅದನ್ನು ಬೆಳ್ತಂಗಡಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಕಾನೂನು ಪ್ರಕಾರ ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿ ನ್ಯಾಯಾಧೀಶರ ಎದುರು ಹೇಳಿಕೆ ನೀಡಲಾಗಿದೆ ಎಂದು ‘ಧರ್ಮಸ್ಥಳ ದೂರುದಾರರ ಪರ ವಕೀಲ ಪವನ್ ಶ್ಯಾಮ್ ಹೇಳಿದ್ದಾರೆ. ಧರ್ಮಸ್ಥಳದಲ್ಲಿ ಹಲವಾರು ಶವಗಳನ್ನು ಸಾಮೂಹಿಕವಾಗಿ ಹೂತು ಹಾಕಿದ ಆರೋಪ ಮಾಡಿರುವ ದೂರುದಾರನನ್ನು ಜುಲೈ 11ರಂದು ಬೆಳ್ತಂಗಡಿ ತಾಲ್ಲೂಕಿನ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.