ಶಿವಮೊಗ್ಗ: ಪೊಲೀಸ್ ಇಲಾಖೆ ಜನರ ರಕ್ಷಣೆ ಹಾಗೂ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿದೆ. ಜನ ಹಾಗೂ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ವಾಹನ ಸವಾರರಿಗೆ ಅನೇಕ ರೀತಿಯ ಅಭಿಯಾನ ಹಾಗೂ ಅರಿವು ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಇಂತಹ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ರಿಪ್ಪನ್ ಪೇಟೆ ಪೊಲೀಸರು ಸೂಡೂರು ಅಪಘಾತ ವಲಯದಲ್ಲಿ ಯಶಸ್ವಿಯಾದ ರೀತಿಯಲ್ಲಿಯೇ ಮತ್ತೊಂದು ವಿನೂತನ ಜಾಗೃತಿ ಕಾರ್ಯಕ್ಕೆ ಕೈ ಹಾಕಿದ್ದಾರೆ.

ಅಪಘಾತ ನಡೆಯುತ್ತಿರುವ ಕೋಡೂರು ಬಳಿಯ ಶಾಂತಪುರ ಗ್ರಾಮದ ಬಳಿಯಲ್ಲಿ ರಿಪ್ಪನ್ ಪೇಟೆ ಪೊಲೀಸ್ ಹಾಗೂ ಕೋಡೂರು ಗ್ರಾಪಂ ಸಹಯೋಗದಲ್ಲಿ ಅಪಘಾತ ವಲಯಗಳಲ್ಲಿ ರಿಫ್ಲೆಕ್ಟರ್ ರೇಡಿಯಂ, ಸೂಚನಾ ಫಲಕ ಅಳವಡಿಸುವುದರ ಮೂಲಕ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ರಸ್ತೆ ಸುರಕ್ಷತೆಯ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಉಮೇಶ್ , ವಿಕ್ಟರ್ , ನಾಗೇಶ್ ಕೋಡೂರು ಗ್ರಾಪಂ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ , ಮಾಜಿ ಅಧ್ಯಕ್ಷರಾದ ಉಮೇಶ್ ಸೇರಿದಂತೆ ಇನ್ನಿತರರಿದ್ದರು.



















