ಒಮ್ಮೊಮ್ಮೆ ಭೂಗತ ಲೋಕದಲ್ಲಿ ಪೊಲೀಸರು ಎಷ್ಟೇ ಹರಸಾಹಸ ಪಟ್ಟರೂ ಕೆಲವು ಪ್ರಕರಣಗಳನ್ನು ಭೇದಿಸಲು ಆಗುವುದಿಲ್ಲ. ಆದರೂ ಕೆಲವು ಪ್ರಕರಣಗಳನ್ನು ಅಷ್ಟೇ ಚಾಣಾಕ್ಷತನದಿಂದ ಭೇದಿಸಿರುವುದನ್ನು ನಾವು ನೋಡಿರುತ್ತೇವೆ. ಈಗ ಅಮೆರಿಕದಲ್ಲಿ ಬರೋಬ್ಬರಿ 50 ವರ್ಷಗಳ ಹಿಂದಿನ ಕೊಲೆ ಪ್ರಕರಣವೊಂದನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
1973ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಮಹಿಳೆಯೊಬ್ಬರನ್ನು ಗುಂಡಿಕ್ಕಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಘಟನೆ ನಡೆದ ಅವಧಿಯಲ್ಲಿದ್ದ ಅಧಿಕಾರಿಗಳು ಈಗ ಬಹುಶಃ ಜೀವಂತ ಇಲ್ಲ ಎನ್ನಬಹುದು. ಆದರೂ ಈ ಪ್ರಕರಣದ ಶಂಕಿತ ಹಂತಕನನ್ನು ಪೊಲೀಸರು ಈಗ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಮೆರಿಕದ ಇದಾಹೋ ರಾಜ್ಯದ 75 ವರ್ಷದ ಮೈಕೆಲ್ ಯುಜೀನ್ ಮುಲ್ಲೆನ್ ಎಂಬ ಶಂಕಿತ ಆರೋಪಿಯನ್ನು ಡಿಎನ್ ಎ ಪುರಾವೆಗಳ ಆಧಾರದಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸದ್ಯ ಆತನನ್ನು ಬಂಧಿಸಿರುವ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. 1973ರ ನವೆಂಬರ್‌ನಲ್ಲಿ 31 ವರ್ಷದ ಫಿಶೆರ್ ಹತ್ಯೆ ನಡೆದಿತ್ತು. ಆಗ ಹತ್ಯೆಯಾದ ಮಹಿಳೆ ಕ್ಯಾಲಿಫೋರ್ನಿಯಾದ ಸ್ಯಾನ್ ರಾಫೆಲ್ ನಲ್ಲಿ ತಮ್ಮ ಪತಿ ಹಾಗೂ ಮಗಳ ಜತೆ ವಾಸವಿದ್ದರು.
ನೀನಾ ಫಿಶೆರ್ ಮತ್ತು ಅವರ ಪತಿ ಇಬ್ಬರೂ ಸ್ವೀಡಿಶ್ ಪ್ರಜೆಗಳಾಗಿದ್ದು, ಸ್ವೀಡನ್ ಗೆ ಮರಳಲು ತಯಾರಿ ನಡೆಸುತ್ತಿದ್ದರು. ಆದರೆ, ಪತಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾಗಿತ್ತು. ಅಲ್ಲದೇ, ದೇಹದಲ್ಲಿ ಮೂರು ಗುಂಡೇಟುಗಳಿದ್ದವು. ಆ ವೇಳೆ ಪೊಲೀಸರು ಹಲವಾರು ಸಾಕ್ಷಿಗಳನ್ನು ಕಲೆ ಹಾಕಿದ್ದರು. ಆದರೆ, ಆರೋಪಿಯ ಸುಳಿವು ಮಾತ್ರ ಪತ್ತೆಯಾಗಿರಲಿಲ್ಲ. ಹಲವಾರು ವರ್ಷಗಳ ಪ್ರಯತ್ನದ ನಂತರ, ಡಿಎನ್ ಎ ವರದಿ ತನಿಖೆಯಲ್ಲಿ ಮುಲ್ಲೆನ್ ಶಂಕಿತ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕಾನೂನಿನಿಂದ ಯಾರೂ ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂಬುವುದಕ್ಕೆ ಇದೇ ಸಾಕ್ಷಿ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.