ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಒಡಿಶಾದ ಜರ್ಸುಗುಡಾದಿಂದ ಬಿಎಸ್‌ಎನ್‌ಎಲ್‌ನ ಸಂಪೂರ್ಣ ಸ್ವದೇಶಿ 4ಜಿ ನೆಟ್‌ವರ್ಕ್ ಮತ್ತು 97,500ಕ್ಕೂ ಹೆಚ್ಚು 4ಜಿ ಮೊಬೈಲ್ ಟವರ್‌ಗಳನ್ನು ಲೋಕಾರ್ಪಣೆ ಮಾಡಿದರು. ಈ ಮೂಲಕ ಭಾರತವು ಟೆಲಿಕಾಂ ಕ್ಷೇತ್ರದಲ್ಲಿ ಅವಲಂಬನೆಯಿಂದ ಆತ್ಮವಿಶ್ವಾಸದ ಕಡೆಗೆ ಸಾಗುತ್ತಿದೆ ಎಂದು ಅವರು ಬಣ್ಣಿಸಿದರು.
ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಟ್ವಿಟರ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, “ಬಿಎಸ್ಸೆನ್ನೆಲ್‌ನ 4ಜಿ ಸ್ವದೇಶಿ ಮನೋಭಾವವನ್ನು ಸಾಕಾರಗೊಳಿಸಿದೆ. 92,000ಕ್ಕೂ ಹೆಚ್ಚು ಸೈಟ್‌ಗಳು 22 ದಶಲಕ್ಷ ಭಾರತೀಯರನ್ನು ಸಂಪರ್ಕಿಸುತ್ತಿದ್ದು, ಇದು ಉದ್ಯೋಗ, ರಫ್ತು ಮತ್ತು ‘ಆತ್ಮನಿರ್ಭರ ಭಾರತ’ದ ದೃಷ್ಟಿಕೋನವನ್ನು ಮುನ್ನಡೆಸುತ್ತಿದೆ,” ಎಂದು ಹೇಳಿದರು. ಸುಮಾರು 37,000 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪೂರ್ಣ ದೇಶೀಯ ತಂತ್ರಜ್ಞಾನ ಬಳಸಿ ಈ ಟವರ್‌ಗಳನ್ನು ನಿರ್ಮಿಸಲಾಗಿದೆ.
ಸಂಪರ್ಕ ಕ್ರಾಂತಿ ಮತ್ತು ಒಡಿಶಾಗೆ ಕೊಡುಗೆ
ಒಡಿಶಾ ಭೇಟಿಯ ಅಂಗವಾಗಿ ಪ್ರಧಾನಿ ಮೋದಿ ಅವರು 50,000 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಈ ಹೊಸ 4ಜಿ ಟವರ್‌ಗಳು ದುರ್ಗಮ ಪ್ರದೇಶಗಳು, ಗಡಿ ಪ್ರದೇಶಗಳು ಮತ್ತು ಮಾವೋವಾದಿ ಪೀಡಿತ ಪ್ರದೇಶಗಳಲ್ಲಿ ಸಂಪರ್ಕವನ್ನು ಗಣನೀಯವಾಗಿ ಹೆಚ್ಚಿಸಲಿವೆ ಎಂದರು. ಅಲ್ಲದೇ, “ಈ ದಶಕವು ಒಡಿಶಾವನ್ನು ಸಮೃದ್ಧಿಯತ್ತ ಕೊಂಡೊಯ್ಯಲಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಒಡಿಶಾಗೆ ಎರಡು ಸೆಮಿಕಂಡಕ್ಟರ್ ಘಟಕಗಳನ್ನು ಅನುಮೋದಿಸಿದೆ ಮತ್ತು ರಾಜ್ಯದಲ್ಲಿ ಸೆಮಿಕಂಡಕ್ಟರ್ ಪಾರ್ಕ್ ಕೂಡ ನಿರ್ಮಾಣವಾಗಲಿದೆ,” ಎಂದು ಪ್ರಧಾನಿ ಮೋದಿ ತಿಳಿಸಿದರು.



















