ಗುವಾಹಟಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಅಸ್ಸಾಂಗೆ ಭೇಟಿ ನೀಡಲಿದ್ದು, ಭಾರತದ ಮೊದಲ ಪ್ರಕೃತಿಯ ಥೀಮ್ ಹೊಂದಿರುವ ವಿಮಾನ ನಿಲ್ದಾಣ ಟರ್ಮಿನಲ್ ಅನ್ನು ಉದ್ಘಾಟಿಸಲಿದ್ದಾರೆ. ಗುವಾಹಟಿಯ ಲೋಕಪ್ರಿಯಾ ಗೋಪಿನಾಥ್ ಬರ್ಡೋಲೊಯಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 4,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿತವಾದ ಈ ಹೊಸ ಟರ್ಮಿನಲ್ ಕಟ್ಟಡ ದೇಶದ ಪೂರ್ವೋತ್ತರ ಭಾಗದ ವಿಮಾನ ಸಾರಿಗೆಯ ಪ್ರಮುಖ ಕೇಂದ್ರವಾಗಲಿದೆ.
ಪ್ರಧಾನಮಂತ್ರಿ ಅವರು ತಮ್ಮ ಎರಡು ದಿನಗಳ ಅಸ್ಸಾಂ ಭೇಟಿಯ ಭಾಗವಾಗಿ ಶನಿವಾರ ಮಧ್ಯಾಹ್ನ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಅವರು ರಾಜ್ಯದ ಮೊದಲ ಮುಖ್ಯಮಂತ್ರಿ ಗೋಪಿನಾಥ್ ಬರ್ಡೋಲೊಯಿಯವರ 80 ಅಡಿ ಎತ್ತರದ ಪ್ರತಿಮೆಯನ್ನೂ ಅನಾವರಣಗೊಳಿಸಲಿದ್ದಾರೆ.

ಪ್ರಧಾನಮಂತ್ರಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿ, “ಗುವಾಹಟಿಯ ಹೊಸ ಟರ್ಮಿನಲ್ ಉದ್ಘಾಟನೆ ಅಸ್ಸಾಂ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ವೇಗ ನೀಡಲಿದೆ. ಇದರಿಂದ ಪ್ರವಾಸೋದ್ಯಮ, ವ್ಯಾಪಾರ, ಹಾಗೆಯೇ ಜನಜೀವನ ಸುಲಭಗೊಳ್ಳಲಿದೆ,” ಎಂದು ತಿಳಿಸಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರು ಪ್ರಧಾನಮಂತ್ರಿಯ ಭೇಟಿಗೆ ಸಂತೋಷ ವ್ಯಕ್ತಪಡಿಸಿ, “ಪ್ರಧಾನಮಂತ್ರಿ ಅವರ ನೇತೃತ್ವದಲ್ಲಿ ಅಸ್ಸಾಂ ಭಾರತದ ಬೆಳವಣಿಗೆಯ ಪ್ರಮುಖ ಇಂಜಿನ್ ಆಗುತ್ತಿದೆ. ಹೊಸ ಟರ್ಮಿನಲ್ ರಾಜ್ಯದ ಅಭಿವೃದ್ಧಿ ಕಥೆಗೆ ಹೊಸ ಮೆರುಗು ನೀಡಲಿದೆ,” ಎಂದು ಪ್ರತಿಕ್ರಿಯಿಸಿದ್ದಾರೆ.
ಉದ್ಘಾಟನಾ ಸಮಾರಂಭದ ಬಳಿಕ ಮೋದಿ ಅವರು ಟರ್ಮಿನಲ್ ಒಳಗೆ 15 ನಿಮಿಷಗಳ ಸುತ್ತಾಟ ನಡೆಸಲಿದ್ದಾರೆ. ನಂತರ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ, ಗುವಾಹಟಿಯ ಬಿಜೆಪಿ ಕಚೇರಿಯತ್ತ ರೋಡ್‌ಶೋ ನಡಿಸಲಿದ್ದಾರೆ.
ಭಾನುವಾರ ಅವರು ಬ್ರಹ್ಮಪುತ್ರಾ ನದಿಯಲ್ಲಿ ಕ್ರೂಸ್ ನೌಕೆಯಾದ ಚರೈದೇವುಯಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ “ಪರೀಕ್ಷಾ ಪೆ ಚರ್ಚಾ” ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹಾಗೆಯೇ 1979ರ ಅಸ್ಸಾಂ ಚಳುವಳಿಯ ವೇಳೆ ಬಲಿಯಾದ 860 ಹೋರಾಟಗಾರರ ಸ್ಮರಣಾರ್ಥ ನಿರ್ಮಿಸಿದ ಸ್ವಹೀದ ಸ್ಮಾರಕ್ ಕ್ಷೇತ್ರದಲ್ಲಿ ಶ್ರದ್ದಾಂಜಲಿ ಅರ್ಪಿಸಲಿದ್ದಾರೆ.
ಅಸ್ಸಾಂ ಪ್ರವಾಸದ ಅಂತಿಮ ದಿನ ಅವರು ಡಿಬ್ರುಗಢದ ಮೂಲಕ ನಾಮರೂಪ್‌ಗೆ ತೆರಳಿ 12,000 ಕೋಟಿ ರೂ. ವೆಚ್ಚದ ಅಮೋನಿಯಾ–ಯೂರಿಯಾ ಗೊಬ್ಬರ ಕಾರ್ಖಾನೆಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಹೊಸ ಯೋಜನೆ ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಮಹತ್ತರ ಪ್ರೋತ್ಸಾಹ ನೀಡಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಹತ್ಯೆಗೆ ಸಹೋದ್ಯೋಗಿಯ ಸುಳ್ಳು ಆರೋಪವೇ ಕಾರಣ : ತಸ್ಲಿಮಾ ನಸ್ರೀನ್ ಗಂಭೀರ ಆರೋಪ


















