ಬೆಂಗಳೂರು: ಕೇಂದ್ರ ಸರ್ಕಾರವು ದೇಶದ ಕೋಟ್ಯಂತರ ಬೀದಿ ಬದಿ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಲು ಪ್ರಧಾನ ಮಂತ್ರಿ ಸ್ಟ್ರೀಟ್ ವೆಂಡರ್ಸ್ ಆತ್ಮನಿರ್ಭರ ನಿಧಿ (PM SVANidhi) ಎಂಬ ಯೋಜನೆ ಜಾರಿಗೆ ತಂದಿದೆ. ಅಲ್ಲದೆ, ಈ ಯೋಜನೆಯನ್ನು 2030ರ ಡಿಸೆಂಬರ್ 31ರವರೆಗೆ ವಿಸ್ತರಣೆ ಮಾಡಲಾಗಿದೆ. ಇದರಿಂದಾಗಿ ದೇಶದ 1.15 ಕೋಟಿ ಬೀದಿ ಬದಿ ವ್ಯಾಪಾರಿಗಳಿಗೆ ಶೇ.7ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ಸಿಗಲಿದೆ. ಯೋಜನೆ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಸಾಲದ ಮಿತಿ ಏರಿಕೆ
ಪಿಎಂ ಸ್ವನಿಧಿ ಯೋಜನೆಯಲ್ಲಿ ಈ ಮೊದಲು ಬೀದಿ ವ್ಯಾಪಾರಿಗಳು ಹಾಗೂ ತಳ್ಳುಗಾಡಿ ವ್ಯಾಪಾರಿಗಳಿಗೆ ಮೊದಲ ಹಂತದಲ್ಲಿ ಕೇವಲ 10,000ರೂ. ಸಾಲ ಸೌಲಭ್ಯ ಮಾತ್ರ ನೀಡಲಾಗುತ್ತಿತ್ತು. ಇದೀಗ ಈ ಮಿತಿಯನ್ನು 15,000ರೂ.ವರೆಗೆ ಏರಿಸಲಾಗಿದೆ. ಎರಡನೇ ಹಂತದಲ್ಲಿ 20 ಸಾವಿರ ರೂ. ನೀಡಲಾಗುತ್ತಿದ್ದ ಸಾಲ ಮಿತಿಯು ಇದೀಗ 25 ಸಾವಿರ ರೂಪಾಯಿಗಳಿಗೆ ಏರಿಕೆಯಾಗಿದೆ.
ಎರಡು ಬಾರಿ ನೀಡಿದ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿಸಿದ ಸಣ್ಣ ವ್ಯಾಪಾರಿಗಳಿಗೆ ಮೂರನೇ ಹಂತದಲ್ಲಿ 30 ಸಾವಿರ ರೂ.ವರೆಗೆ ಸಾಲ ಸೌಲಭ್ಯ ನೀಡಗುತ್ತಿತ್ತು. ಇದೀಗ ಸರ್ಕಾರವು ಈ ಮಿತಿಯನ್ನು 50,000ರೂ. ಗಳಿಗೆ ಹೆಚ್ಚಿಸಿದೆ. ಇದರಿಂದಾಗಿ ವ್ಯಾಪಾರಿಗಳು ಒಟ್ಟು 80 ಸಾವಿರ ರೂ.ವರೆಗೆ ಸಾಲ ಪಡೆಯಬಹುದಾಗಿದೆ.
ಸಾಲ ಪಡೆದವರು ಮೊದಲ ಕಂತನ್ನು ಸರಿಯಾದ ಸಮಯಕ್ಕೆ ಕಟ್ಟಬೇಕು. ಒಂದು ವರ್ಷದೊಳಗೆ ಸಾಲ ತೀರಿಸಬೇಕು. ಬಡ್ಡಿ ದರ ಕಡಿಮೆ ಇರುವುದರಿಂದ ಸಾಲದ ಮರುಪಾವತಿ ಸುಲಭವಾಗಿರುತ್ತದೆ. ಇದರಿಂದ ಮತ್ತೆ ಸಾಲ ಪಡೆಯಲು ಸುಲಭವಾಗುತ್ತದೆ. ಸಾಲ ಪಡೆಯಲು ಆಧಾರ್, ಮೊಬೈಲ್ ನಂಬರ್ ಮತ್ತು ಬ್ಯಾಂಕ್ ಖಾತೆ ಇರಬೇಕು. ಇಷ್ಟಿದ್ದರೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಸಾಲ ಪಡೆಯಬಹುದು.
ಉದಾಹರಣೆಗೆ, ಮೊದಲ ಬಾರಿಗೆ ಪಡೆಯುವಾಗ 10,000 ರೂ. ಸಾಲ ಸಿಗುತ್ತದೆ. ಇದನ್ನು ತೀರಿಸಿದರೆ, ನಂತರ 20,000 ರೂ ಹಾಗೂ 50,000 ರೂವರೆಗೂ ಸಾಲ ಪಡೆಯಬಹುದು. ಈ ಕಿರುಸಾಲಗಳಿಗೆ ಶೇ. 7ರಷ್ಟು ಬಡ್ಡಿ ಸಬ್ಸಿಡಿ ಸಿಗುತ್ತದೆ. ದೇಶಾದ್ಯಂತ 1.15 ಕೋಟಿಗೂ ಅಧಿಕ ವ್ಯಾಪಾರಿಗಳಿಗೆ ಯೋಜನೆಯಿಂದ ಸಾಲ ಸೌಲಭ್ಯ ಸಿಗಲಿದೆ. ಅರ್ಜಿ ಸಲ್ಲಿಸಲು ಬಯಸುವವರು pmsvanidhi.mohua.gov.inಗೆ ಭೇಟಿ ನೀಡಬಹುದಾಗಿದೆ.



















