ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಪಾಕ್ ಆಕ್ರಮಿತ ಕಾಶ್ಮೀರದ 9 ಉಗ್ರರ ನೆಲೆಗಳ ಮೇಲೆ ಭಾರತವು ವಾಯುದಾಳಿ ನಡೆಸಿದೆ. ದಾಳಿಯಲ್ಲಿ ಸುಮಾರು 80ಕ್ಕೂ ಅಧಿಕ ಉಗ್ರರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಇದರ ಬೆನ್ನಲ್ಲೇ, ಕಾರ್ಯಾಚರಣೆಗೆ ʼಆಪರೇಷನ್ ಸಿಂಧೂರʼ ಎಂಬುದಾಗಿ ಯಾರು ಹೆಸರಿಟ್ಟಿದ್ದು ಎಂಬ ಚರ್ಚೆಯಾಗಿದೆ. ಇನ್ನು, ಪ್ರಧಾನಿ ನರೇಂದ್ರ ಮೋದಿ ಅವರೇ ಆಪರೇಷನ್ ಸಿಂಧೂರ ಎಂಬುದಾಗಿ ಹೆಸರಿಟ್ಟಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಹೌದು, ಪ್ರಧಾನಿ ನರೇಂದ್ರ ಮೋದಿ ಅವರೇ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ ಎಂಬುದಾಗಿ ಹೆಸರು ಸೂಚಿಸಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳನ್ನು ಆಧರಿಸಿ ವರದಿ ಮಾಡಲಾಗಿದೆ. ಪಹಲ್ಗಾಮ್ ನಲ್ಲಿ ಹತ್ಯೆಗೀಡಾದ 24 ಭಾರತೀಯರ ಪತ್ನಿಯರು ವಿಧವೆಯರಾಗಿದ್ದು, ಅವರಿಗೆ ನ್ಯಾಯ ಕೊಡಿಸುವ ದಿಸೆಯಲ್ಲಿ ಪ್ರಧಾನಿಯವರೇ ಆಪರೇಷನ್ ಸಿಂಧೂರ ಎಂಬುದಾಗಿ ಹೆಸರಿಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ ಎಂಬುದಾಗಿ ಹೆಸರಿಟ್ಟಿರುವ ಕುರಿತು ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ದಾಳಿಯಲ್ಲಿ ಪತಿಯರನ್ನು ಕಳೆದುಕೊಂಡ ಮಹಿಳೆಯರಿಗೆ ನ್ಯಾಯ ಕೊಡಿಸಲು ಇದಕ್ಕಿಂತ ಒಳ್ಳೆಯ ಹೆಸರು ಇರಲಿಲ್ಲ ಎಂದು ಜಾಲತಾಣಗಳಲ್ಲಿ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಭಾರತದ ದಾಳಿಯಿಂದ ಪಾಕಿಸ್ತಾನ ತತ್ತರಿಸಿಹೋಗಿದ್ದು, ಷೇರು ಮಾರುಕಟ್ಟೆ ಕೂಡ ಭಾರಿ ಕುಸಿದಿದೆ.
ಏಪ್ರಿಲ್ 22ರಂದು ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ವಿದೇಶಿಯರು ಸೇರಿ ಒಟ್ಟು 26 ಮಂದಿ ಮೃತಪಟ್ಟಿದ್ದರು. ದಾಳಿಯ ಬಳಿಕ ಮಾತನಾಡಿದ್ದ ಮೋದಿ, ಉಗ್ರರು ಎಲ್ಲೇ ಅಡಗಿರಲಿ, ಅವರನ್ನು ಮುಗಿಸದೆ ಬಿಡುವುದಿಲ್ಲ ಎಂದು ಶಪಥ ಮಾಡಿದ್ದರು. ಈಗ ರಾತ್ರೋರಾತ್ರಿ ದಾಳಿ ನಡೆಸುವ ಮೂಲಕ ಉಗ್ರರನ್ನು ಹತ್ಯೆ ಮಾಡಲಾಗಿದೆ.



















