ನವದೆಹಲಿ: ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರದಿಂದ ಎರಡು ದಿನಗಳ ಸೌದಿ ಅರೇಬಿಯಾ ಪ್ರವಾಸ(PM Modi Saudi Visit) ಕೈಗೊಂಡಿದ್ದಾರೆ. ಇದು ಕಳೆದ 10 ವರ್ಷಗಳಲ್ಲಿ ಸೌದಿ ಅರೇಬಿಯಾಕ್ಕೆ ಮೋದಿಯವರ ಮೂರನೇ ಭೇಟಿ ಮತ್ತು ಜೆಡ್ಡಾ ನಗರಕ್ಕೆ ಮೊದಲ ಭೇಟಿಯಾಗಿದೆ. ಈ ಭೇಟಿ ವೇಳೆ ಮೋದಿಯವರು ಸೌದಿ ಅರೇಬಿಯಾದ ರಾಜಕುಮಾರ ಮತ್ತು ಪ್ರಧಾನಿಯೊಂದಿಗೆ ಮಾತುಕತೆ ನಡೆಸಲಿದ್ದು, ಹಜ್ ಕೋಟಾ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ.
ಏಪ್ರಿಲ್ 22 ಮತ್ತು 23ರಂದು ಪ್ರಧಾನಿ ಮೋದಿ ಜೆಡ್ಡಾದಲ್ಲೇ ಇರಲಿದ್ದಾರೆ. ಸೌದಿಗೆ ತೆರಳುವ ಮೊದಲು, ಸೌದಿ ಅರೇಬಿಯಾದೊಂದಿಗಿನ ಭಾರತದ ದೀರ್ಘ ಮತ್ತು ಐತಿಹಾಸಿಕ ಸಂಬಂಧಗಳು ಇತ್ತೀಚಿನ ವರ್ಷಗಳಲ್ಲಿ ಎರಡೂ ದೇಶಗಳ ನಡುವಿನ ವ್ಯೂಹಾತ್ಮಕ ಆಳ ಮತ್ತು ವೇಗವನ್ನು ಪಡೆದುಕೊಂಡಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
“ಒಟ್ಟಾಗಿ ನಾವು ರಕ್ಷಣೆ, ವ್ಯಾಪಾರ, ಹೂಡಿಕೆ, ಇಂಧನ ಮತ್ತು ಜನರ ನಡುವಿನ ಬಾಂಧವ್ಯ ಸೇರಿದಂತೆ ಪರಸ್ಪರ ಪ್ರಯೋಜನಕಾರಿ ಮತ್ತು ಗಣನೀಯ ಪಾಲುದಾರಿಕೆಯನ್ನು ಹೊಂದಿದ್ದೇವೆ” ಎಂದು ಮೋದಿ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ. ಸೌದಿ ಅರೇಬಿಯಾದಲ್ಲಿ ವ್ಯೂಹಾತ್ಮಕ ಪಾಲುದಾರಿಕೆ ಮಂಡಳಿಯ ಎರಡನೇ ಸಭೆಯಲ್ಲೂ ಪ್ರಧಾನಿ ಮೋದಿ ಅವರು ಭಾಗವಹಿಸಲಿದ್ದಾರೆ.
ಹಜ್ ಕೋಟಾ: ಇಂದು ಸಂಜೆ ಸೌದಿ ಅರೇಬಿಯಾದ ರಾಜಕುಮಾರ ಮತ್ತು ಪ್ರಧಾನಿ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಅವರೊಂದಿಗೆ ಮೋದಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಭಾರತೀಯ ಯಾತ್ರಾರ್ಥಿಗಳಿಗೆ ಕೋಟಾ ಸೇರಿದಂತೆ ಹಜ್ ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. 2014 ರಲ್ಲಿ 136,020 ಆಗಿದ್ದ ಭಾರತದ ಹಜ್ ಕೋಟಾ ಈಗ 175,025ಕ್ಕೆ ಏರಿದೆ. 122,518 ಯಾತ್ರಾರ್ಥಿಗಳಿಗೆ ವ್ಯವಸ್ಥೆಗಳನ್ನು ಅಂತಿಮಗೊಳಿಸಲಾಗಿದೆ. ಆದಾಗ್ಯೂ, ಬೇರೆ ಬೇರೆ ಸಮಸ್ಯೆಗಳಿಂದಾಗಿ ಸುಮಾರು 42,000 ಭಾರತೀಯರು ಈ ವರ್ಷ ಪವಿತ್ರ ತೀರ್ಥಯಾತ್ರೆ ಮಾಡಲು ಸಾಧ್ಯವಾಗುತ್ತಿಲ್ಲ.
ಆರು ಒಪ್ಪಂದಗಳಿಗೆ ಸಹಿ
ಪ್ರಧಾನಿ ಮೋದಿ ಸೌದಿ ಅರೇಬಿಯಾ ಭೇಟಿ ವೇಳೆ ಉಭಯ ದೇಶಗಳು ಆರು ಒಪ್ಪಂದಗಳಿಗೆ (ಎಂಒಯು) ಸಹಿ ಹಾಕಲಿವೆ ಎಂದು ಮೂಲಗಳು ತಿಳಿಸಿವೆ. ಬಾಹ್ಯಾಕಾಶ, ಇಂಧನ, ಆರೋಗ್ಯ, ವಿಜ್ಞಾನ ಮತ್ತು ವೈಜ್ಞಾನಿಕ ಸಂಶೋಧನೆ, ಸಂಸ್ಕೃತಿ ಮತ್ತು ಸುಧಾರಿತ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಎರಡೂ ಕಡೆಯವರು ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ.
ಪ್ಯಾಲೆಸ್ತೀನ್ ಸಂಘರ್ಷದ ಕುರಿತೂ ಚರ್ಚೆ
ಕಳೆದ ವಾರ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಪಶ್ಚಿಮ ಏಷ್ಯಾದ ಪರಿಸ್ಥಿತಿ, ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ ಮತ್ತು ಹೌತಿ ದಾಳಿಯಿಂದ ಕಡಲ ಭದ್ರತೆಗೆ ಬೆದರಿಕೆ ಸೇರಿದಂತೆ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆ ಚರ್ಚಿಸುವ ನಿಟ್ಟಿನಲ್ಲೂ ಪ್ರಧಾನಿ ಮೋದಿ ಅವರ ಈ ಭೇಟಿ ಮಹತ್ವದ್ದು ಎಂದು ಹೇಳಿದ್ದರು. ಹೀಗಾಗಿ, ಭೇಟಿಯ ವೇಳೆ ಈ ವಿಚಾರಗಳೂ ಪ್ರಸ್ತಾಪವಾಗುವ ಸಾಧ್ಯತೆಯಿದೆ.
ಭಾರತೀಯರೊಂದಿಗೆ ಸಂವಾದ
ಸೌದಿ ಅರೇಬಿಯಾದಲ್ಲಿರುವ ಭಾರತೀಯ ಸಮುದಾಯದೊಂದಿಗೂ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ಸೌದಿ ಅರೇಬಿಯಾವು ಭಾರತದ ಐದನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ.



















