ವಾಷಿಂಗ್ಟನ್: ಭಾರತಕ್ಕೆ ಭಾರೀ ತೆರಿಗೆಯ ಬರೆ ಎಳೆದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಭಾರತಕ್ಕೆ ಹೊಸ ಎಚ್ಚರಿಕೆ ನೀಡಿದ್ದಾರೆ. ಭಾರತವು ರಷ್ಯಾದಿಂದ ತೈಲ ಆಮದು ಮುಂದುವರಿಸಿದರೆ, ಅಮೆರಿಕವು ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಲಿದೆ ಎಂದು ಎಚ್ಚರಿಸಿದ್ದಾರೆ.
ತಮ್ಮ ಏರ್ ಫೋರ್ಸ್ ಒನ್ ವಿಮಾನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಟ್ರಂಪ್, “ಭಾರತವು ತೈಲ ವಿಚಾರದಲ್ಲಿ ನಾವು ಹೇಳಿದಂತೆ ನಡೆದುಕೊಳ್ಳದಿದ್ದರೆ, ನಾವು ಅವರ ಮೇಲೆ ಮತ್ತಷ್ಟು ತೆರಿಗೆ ವಿಧಿಸಬೇಕಾಗುತ್ತದೆ” ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಭಾರತವು ಈಗಾಗಲೇ ರಷ್ಯಾದಿಂದ ತೈಲ ಖರೀದಿಯನ್ನು ಕಡಿತಗೊಳಿಸಿದೆ ಎಂದೂ ತಿಳಿಸಿದ್ದಾರೆ.
“ಮೋದಿ ಒಬ್ಬ ಒಳ್ಳೆಯ ವ್ಯಕ್ತಿ, ಅತ್ಯುತ್ತಮ ನಾಯಕ. ರಷ್ಯಾದಿಂದ ತೈಲ ಖರೀದಿಯನ್ನು ಭಾರತ ಮುಂದುವರಿಸಿದ್ದಕ್ಕೆ ನನಗೆ ಅಸಮಾಧಾನವಾಗಿದೆ ಎಂಬುದು ಅವರಿಗೆ ಗೊತ್ತಿತ್ತು. ನನ್ನನ್ನು ಖುಷಿಗೊಳಿಸುವುದು ಈಗ ಬಹಳ ಮುಖ್ಯ. ನಮ್ಮೊಂದಿಗೆ ಭಾರತವು ವಾಣಿಜ್ಯ ಪಾಲುದಾರಿಕೆ ನಿರ್ವಹಿಸುತ್ತಿದೆ. ಹೀಗಾಗಿ, ಅವರ ಮೇಲೆ ನಾವು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸುಂಕ ಹೆಚ್ಚಿಸಬಹುದು” ಎಂದಿದ್ದಾರೆ.
ಭಾರತ ತನ್ನ ತೈಲ ಖರೀದಿಯನ್ನು ಆಂತರಿಕ ಇಂಧನ ಭದ್ರತೆಗೆ ಅಗತ್ಯವಾದುದು ಎಂದು ಹೇಳಿಕೊಂಡು ಬಂದಿದೆ. ಇದೇ ವೇಳೆ, ಅಮೆರಿಕ ಮತ್ತು ಭಾರತದ ಅಧಿಕಾರಿಗಳ ಮಧ್ಯೆ ವ್ಯಾಪಾರ ಮಾತುಕತೆ ಮುಂದುವರಿದಿದೆ.
ಇತ್ತೀಚೆಗೆ ಟ್ರಂಪ್ ಮತ್ತು ಪ್ರಧಾನಿ ಮೋದಿ ದೂರವಾಣಿ ಸಂಭಾಷಣೆ ನಡೆಸಿದ್ದರು. ಆ ಸಂದರ್ಭದಲ್ಲಿ ಇಬ್ಬರೂ ನಾಯಕರು ದ್ವಿಪಕ್ಷೀಯ ವ್ಯಾಪಾರದ ವೇಗವನ್ನು ಉಳಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ್ದರು.
ಇದನ್ನೂ ಓದಿ: ಮೋದಿ-ನಾವು ಎಂದಿಗೂ ಸ್ನೇಹಿತರು: ಟ್ರಂಪ್ ಯೂಟರ್ನ್; ನಿಮ್ಮ ಭಾವನೆಗಳನ್ನು ಗೌರವಿಸುವೆ: ಪ್ರಧಾನಿ ಮೋದಿ ಪ್ರತಿಕ್ರಿಯೆ



















