ಮುಂಬಯಿ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುವ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ಮಹಾರಾಷ್ಟ್ರ ಚನಾವಣೆಯಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ನಾನು ಸಂಸತ್ತಿನಲ್ಲಿ ಜಾತಿ ಗಣತಿ ಹಾಗೂ ಮೀಸಲಾತಿ ವಿಷಯದ ಕುರಿತು ಮಾತನಾಡಿದ್ದೆ. ಆದರೆ, ಇದನ್ನೇ ಮುಂದಿಟ್ಟುಕೊಂಡು ಪ್ರಧಾನಿ ಮೋದಿ ನನ್ನನ್ನು ಮೀಸಲಾತಿ ವಿರೋಧಿ ಎನ್ನುತ್ತಿದ್ದಾರೆ. ಮುಂದೆ ಜಾತಿ ಗಣತಿ ವಿರೋಧಿ ಎಂದೂ ಹೇಳಬಹುದು. ನನ್ನ ಸಹೋದರಿ ಮಾತನಾಡುತ್ತಿರುವ ವಿಷಯವನ್ನೂ ಅವರು ಪ್ರಸ್ತಾಪಿಸುತ್ತಿದ್ದಾರೆ. ತಮ್ಮ ಭಾಷಣದಲ್ಲಿ ನಮ್ಮ ವಿಷಯಗಳನ್ನೇ ಮಾತನಾಡುತ್ತಿದ್ದಾರೆ ಎಂದಿದ್ದಾರೆ.
ಮೋದಿ ಅವರು ಜಾತಿ ಗಣತಿಗೆ ವಿರೋಧಿಯಾಗಿದ್ದಾರೆ. ಇಲ್ಲದಿದ್ದಲ್ಲಿ 5ರಿಂದ 7 ವರ್ಷಗಳ ಹಿಂದೆಯೇ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಿದ್ದರು. ಆದರೆ, ಅವರಿಗೆ ಅದು ಆಗುತ್ತಿಲ್ಲ ಎಂದಿದ್ದಾರೆ.