ವಾಷಿಂಗ್ಟನ್: ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಶೃಂಗದಲ್ಲಿ ರಷ್ಯಾ ಮತ್ತು ಚೀನಾ ಅಧ್ಯಕ್ಷರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ತೋರಿರುವ ಆತ್ಮೀಯತೆಯು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸರಿಯಾಗಿ ಘಾಸಿಗೊಳಿಸಿದೆ. ಇದಾದ ಬಳಿಕ ಭಾರತದ ವಿಚಾರದಲ್ಲಿ ಅವರು ಮಂಡಿಯೂರುವ ಲಕ್ಷಣಗಳು ಗೋಚರಿಸುತ್ತಿದ್ದು, ಭಾರತ ಮತ್ತು ಅಮೆರಿಕದ ನಡುವಿನ “ವ್ಯಾಪಾರ ಅಡೆತಡೆಗಳನ್ನು” ನಿವಾರಿಸುವ ನಿಟ್ಟಿನಲ್ಲಿ ಎರಡೂ ದೇಶಗಳು ಮಾತುಕತೆಯನ್ನು ಮುಂದುವರಿಸುತ್ತಿವೆ ಎಂದು ಟ್ರಂಪ್ ಇದೀಗ ಘೋಷಿಸಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ‘ಟ್ರುತ್ ಸೋಶಿಯಲ್’ನಲ್ಲಿ ಈ ಕುರಿತು ಬರೆದುಕೊಂಡಿರುವ ಟ್ರಂಪ್, “ಭಾರತ ಮತ್ತು ಅಮೆರಿಕವು ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಅಡೆತಡೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮಾತುಕತೆಗಳನ್ನು ಮುಂದುವರಿಸುತ್ತಿವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಮುಂಬರುವ ವಾರಗಳಲ್ಲಿ ನನ್ನ ಆತ್ಮೀಯ ಸ್ನೇಹಿತರಾದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಲು ನಾನು ಎದುರು ನೋಡುತ್ತಿದ್ದೇನೆ. ನಮ್ಮ ಎರಡೂ ಮಹಾನ್ ದೇಶಗಳಿಗೆ ಯಶಸ್ವಿ ತೀರ್ಮಾನಕ್ಕೆ ಬರುವಲ್ಲಿ ಯಾವುದೇ ಕಷ್ಟವಾಗುವುದಿಲ್ಲ ಎಂದು ನನಗೆ ಖಾತ್ರಿಯಿದೆ!” ಎಂದು ಹೇಳಿದ್ದಾರೆ.
ಕೆಲವೇ ವಾರಗಳ ಹಿಂದೆ ಅಮೆರಿಕವು ಭಾರತೀಯ ಸರಕುಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಿತ್ತು. ಆದರೆ, ನಂತರದಲ್ಲಾದ ಬೆಳವಣಿಗೆಗಳಿಂದ ಗೊಂದಲಕ್ಕೀಡಾಗಿರುವ ಟ್ರಂಪ್, ಈ ವಾರದ ಆರಂಭದಲ್ಲಿ ಶ್ವೇತಭವನದಲ್ಲಿ ಮಾತನಾಡಿ, ಭಾರತ-ಅಮೆರಿಕ ಸಂಬಂಧವನ್ನು “ಅತ್ಯಂತ ವಿಶೇಷವಾದ ಸಂಬಂಧ” ಎಂದು ಬಣ್ಣಿಸಿದ್ದರು. ಆದರೆ, “ಪ್ರಧಾನಿ ಮೋದಿ ಅವರು ಏನು ಮಾಡುತ್ತಿದ್ದಾರೋ ಅದರ ಬಗ್ಗೆ ನನಗೆ ಅಸಮಾಧಾನವಿದೆ” ಎಂದು ಹೇಳಿದ್ದರು. “ನಾನು ಯಾವಾಗಲೂ ಮೋದಿಯವರ ಸ್ನೇಹಿತನಾಗಿರುತ್ತೇನೆ. ಅವರು ಒಬ್ಬ ಮಹಾನ್ ಪ್ರಧಾನಿ. ಆದರೆ ಅವರು ಸದ್ಯಕ್ಕೆ ಮಾಡುತ್ತಿರುವುದು ನನಗೆ ಇಷ್ಟವಾಗುತ್ತಿಲ್ಲ. ಆದರೂ, ಭಾರತ ಮತ್ತು ಅಮೆರಿಕ ನಡುವೆ ವಿಶೇಷ ಸಂಬಂಧವಿದ್ದು, ಚಿಂತಿಸಬೇಕಾದ ಅಗತ್ಯವಿಲ್ಲ,” ಎಂದು ಅವರು ಹೇಳಿದ್ದರು.
ಟ್ರಂಪ್ ಅವರ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಭಾರತ-ಅಮೆರಿಕ ಸಂಬಂಧವನ್ನು “ಭವಿಷ್ಯದ ದೃಷ್ಟಿಕೋನವಿರುವ ಸಮಗ್ರ ಮತ್ತು ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ” ಎಂದು ಬಣ್ಣಿಸಿದ್ದಾರೆ. “ಅಧ್ಯಕ್ಷ ಟ್ರಂಪ್ ಅವರ ಭಾವನೆಗಳನ್ನು ಮತ್ತು ನಮ್ಮ ಸಂಬಂಧದ ಬಗೆಗಿನ ಸಕಾರಾತ್ಮಕ ಮೌಲ್ಯಮಾಪನವನ್ನು ನಾನು ಸಂಪೂರ್ಣವಾಗಿ ಪ್ರಶಂಸಿಸುತ್ತೇನೆ ಮತ್ತು ಅದಕ್ಕೆ ಸ್ಪಂದಿಸುತ್ತೇನೆ,” ಎಂದು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.



















