ಅಹಮದಾಬಾದ್ ಘನಘೋರ ದುರಂತ ಘಟಿಸಿ 24 ಗಂಟೆಗಳು ಗತಿಸಿವೆ. ಆದರೆ ಅಸಲಿಗೆ ಈ ದುರ್ಘಟನೆಗೆ ಕಾರಣವಾಗಿದ್ದಾದರೂ ಏನು ಅನ್ನೋದಿನ್ನೂ ನಿಗೂಢವಾಗಿದೆ.
ಹತ್ತಾರು ಊಹಾಪೋಹಗಳು ಹರಿದಾಡುತ್ತಿದ್ದು, ಅಂತಿಮ ಕ್ಷಣದಲ್ಲಿ ನಿಜಕ್ಕೂ ಆಗಿದ್ದೇನು? ಅನ್ನೋದಿನ್ನೂ ಅಸ್ಪಷ್ಟ. ಆದರೆ 241 ಮಂದಿಯನ್ನು ಆಹುತಿ ಪಡೆದ ದುರ್ಘಟನೆಯ ನಿಜವಾದ ರಹಸ್ಯ, ವಿಮಾನದ ಬ್ಲ್ಯಾಕ್ ಬಾಕ್ಸ್ ನಲ್ಲಿ ಅಡಗಿದೆ.
ಘಟನಾ ಸ್ಥಳದಲ್ಲಿ ಇಲ್ಲಿಯವರೆಗೂ ಯಾವುದೇ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿಲ್ಲ. ನಿನ್ನೆಯಿಂದ ನಿರಂತರವಾಗಿ ಅಧಿಕಾರಿಗಳ ತಂಡ ಬ್ಲ್ಯಾಕ್ ಬಾಕ್ಸ್ ಗಾಗಿ ಶೋಧ ನಡೆಸುತ್ತಲೇ ಇದೆ. ಆದರೆ ಅವಶೇಷಗಳಡಿ ಇಲ್ಲಿಯವರೆಗೂ ಬಲು ಮಹತ್ವದ್ದಾಗಿರುವ ಬ್ಲ್ಯಾಕ್ ಬಾಕ್ಸ್ ಸುಳಿವು ಸಿಕ್ಕಿಲ್ಲ ಅಂತಾ ಏರಿಂಡಿಯಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಬ್ಲ್ಯಾಕ್ ಬಾಕ್ಸ್ ನಲ್ಲಿ ದುರಂತಕ್ಕೂ ಮುನ್ನ ಕಾಕ್ ಪಿಟ್ ನಲ್ಲಿ ನಡೆದ ಸಂಭಾಷಣೆ ಮತ್ತು ಪೈಲೆಟ್ ದಾಖಲಿಸಿರುವ ಮಾಹಿತಿಯ ಧ್ವನಿ ಮುದ್ರಿಕೆ ಇರುತ್ತೆ. ಈ ಬ್ಲ್ಯಾಕ್ ಬಾಕ್ಸ್ ಪತ್ತೆಯಾದರೆ 241 ಮಂದಿಯ ದುರಂತ ಅಂತ್ಯಕ್ಕೆ ಕಾರಣವಾಗಿದ್ದೇನು ಅನ್ನೋದು ಸ್ಪಷ್ಟವಾಗಲಿದೆ. ಆದರೆ ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ ಆವರಣದ ಅವಶೇಷಗಳಡಿ ಒಂದು ಡಿವಿಆರ್ ಪತ್ತೆಯಾಗಿದ್ದು, ಹೆಚ್ಚಿನ ತನಿಖೆಗೆ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.