ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು 2025ನೇ ಐಪಿಎಲ್ ಋತುವಿಗೆ (IPL 2025) ತಮ್ಮ ಹೊಸ ನಾಯಕನನ್ನು ಗುರುವಾರ (ಫೆಬ್ರವರಿ 13ರಂದು) ಘೋಷಿಸಲು ಸಜ್ಜಾಗಿದೆ ಎಂದು ವರದಿಯಾಗಿದೆ. ಈ ಘೋಷಣೆ ಬೆಂಗಳೂರಿನಲ್ಲಿ ನಡೆಯಲಿದೆ. ಬೆಳಿಗ್ಗೆ 11.30ಕ್ಕೆ ನಾಯಕನ ಆಯ್ಕೆ ಪ್ರಕ್ರಿಯೆ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ನೇರಪ್ರಸಾರವಾಗಲಿದೆ.
ಆರ್ಸಿಬಿ ತಂಡದ ನಾಯಕತ್ವ ಹುದ್ದೆ ಖಾಲಿ ಆಗಿದೆ. ಏಕೆಂದರೆ ತಂಡವು ಫಾಫ್ ಡು ಪ್ಲೆಸಿಸ್ ಅವರನ್ನು ಉಳಿಸಿಕೊಳ್ಳದೇ 2025ರ ಹರಾಜಿಗೆ ಮುನ್ನ ಬಿಡುಗಡೆ ಮಾಡಿತ್ತು. 2022 ರಿಂದ 2024ರವರೆಗೆ ಆರ್ಸಿಬಿಗೆ ನಾಯಕತ್ವ ವಹಿಸಿದ್ದ ಫಾಫ್, 42 ಪಂದ್ಯಗಳಲ್ಲಿ 21 ಗೆಲುವು ಮತ್ತು 21 ಸೋಲು ಕಂಡಿದ್ದರು. ಆದರೆ, ಅವರ ನಾಯಕತ್ವದಲ್ಲಿ ಆರ್ಸಿಬಿ ಯಾವುದೇ ಐಪಿಎಲ್ ಪ್ರಶಸ್ತಿ ಜಯಿಸಲಿಲ್ಲ. ಫಾಫ್ ಅವರನ್ನು ಐಪಿಎಲ್ 2025 ಹರಾಜಿನಲ್ಲಿ ತಂಡ ಪುನಃ ಖರೀದಿಸಲಿಲ್ಲ. ಈ ಮೂಲಕ ಅವರು ಅವರ ಮೂಲ ಬೆಲೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದರು.
ಕೊಹ್ಲಿ ನಾಯಕನಾ?
ನಾಯಕತ್ವದ ಪ್ರಮುಖ ಆಕಾಂಕ್ಷಿ ವಿರಾಟ್ ಕೊಹ್ಲಿ ಆಗಿರುವುದು ನಿರೀಕ್ಷಿತ. 2013 ರಿಂದ 2021ರವರೆಗೆ ಒಂಬತ್ತು ಹಂಗಾಮುಗಳ ಕಾಲ ಆರ್ಸಿಬಿಗೆ ನಾಯಕತ್ವ ವಹಿಸಿದ್ದ ಕೊಹ್ಲಿ, 2023ರಲ್ಲಿ ಮೂರು ಪಂದ್ಯಗಳಿಗೂ ಹಂಗಾಮಿ ನಾಯಕತ್ವ ವಹಿಸಿದ್ದರು. ಒಟ್ಟು 143 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದ ಕೊಹ್ಲಿ, 68 ಗೆಲುವು ಮತ್ತು 70 ಸೋಲು ಅನುಭವಿಸಿದ್ದಾರೆ. ಅವರ ನಾಯಕತ್ವದಲ್ಲಿ ಆರ್ಸಿಬಿ ಪ್ರಶಸ್ತಿ ಗೆಲ್ಲಲಿಲ್ಲ. ಆದರೆ, ಅವರ ವೈಯಕ್ತಿಕ ಪ್ರದರ್ಶನ ಉತ್ತಮವಾಗಿತ್ತು. 2016ರ ಟೂರ್ನಿಯಲ್ಲಿ ಐತಿಹಾಸಿಕ 973 ರನ್ ಗಳಿಸಿದ್ದ ದಾಖಲೆ ಹಾಗೂ 2024ರಲ್ಲಿ 741 ರನ್ ಗಳಿಸಿದ್ದ ಅವರ ಬ್ಯಾಟಿಂಗ್ ಪ್ರಭಾವ ನಾಯಕನ ಸ್ಥಾನಕ್ಕೆ ಪ್ರೇರೇಪಿಸುತ್ತಿದೆ.
ರಜತ್ ಪಾಟೀದಾರ್ ರೇ್ಸ್ನಲ್ಲಿ?
ಸ್ಫೋಟಕ ಬ್ಯಾಟಿಂಗ್ ರಜತ್ ಪಾಟೀದಾರ್ ಹುದ್ದೆಗೆ ಮತ್ತೊಂದು ಆಯ್ಕೆ. ಯಾಕೆಂದರೆ ಕೊಹ್ಲಿಗೆ 36 ವರ್ಷದವರಾಗಿರುವುದರಿಂದ ಅವರು ನಾಯಕತ್ವ ವಹಿಸಲು ಬಯಸಬಹುದೇ ಎಂಬ ಪ್ರಶ್ನೆ ಮುಂದಿದೆ. ಅವರು ನಾಯಕತ್ವ ನಿರಾಕರಿಸಿದರೆ, ರಜತ್ ಪಾಟೀದಾರ್ ಮತ್ತೊಂದು ಆಯ್ಕೆಯಾಗಬಹುದು. 2021ರಿಂದ ಆರ್ಸಿಬಿಯಲ್ಲಿರುವ ಪಾಟೀದಾರ, 2025ರ ಮೆಗಾ ಹರಾಜಿಗೆ ಮುನ್ನ ತಂಡ ಉಳಿಸಿಕೊಂಡ ಮೂರು ಆಟಗಾರರಲ್ಲಿ ಒಬ್ಬರಾಗಿದ್ದರು.
ಪಾಟೀದಾರ್ ರಾಜ್ಯಮಟ್ಟದ ನಾಯಕತ್ವ ಅನುಭವ ಹೊಂದಿದ್ದಾರೆ. 2024-25ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಹಾಗೂ ವಿಜಯ್ ಹಜಾರೆ ಟ್ರೋಫಿಯಲ್ಲಿ ಮಧ್ಯಪ್ರದೇಶ ತಂಡವನ್ನು ಮುನ್ನಡೆಸಿದ್ದರು. ಇತ್ತೀಚಿನ ಟೂರ್ನಿಯಲ್ಲಿಯೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ 428 ರನ್ ಗಳಿಸಿದ್ದರು (ಸ್ಟ್ರೈಕ್ ರೇಟ್ 186.08).
ಐಪಿಎಲ್ನ ಅತ್ಯಂತ ಜನಪ್ರಿಯ ಫ್ರಾಂಚೈಸಿಗಳಲ್ಲೊಂದಾಗಿರುವ ಆರ್ಸಿಬಿ ಇನ್ನೂ ಚಾಂಪಿಯನ್ಶಿಪ್ ಗೆಲ್ಲಿಲ್ಲ. 2024ರಲ್ಲಿ ಆರ್ಸಿಬಿ ಆರಂಭದಲ್ಲಿ ಹಿಂದೆ ಬಿದ್ದಿದ್ದರೂ ನಂತರ ಸತತ ಏಳು ಗೆಲುವುಗಳೊಂದಿಗೆ ಪ್ಲೇಆಫ್ಗೆ ಪ್ರವೇಶಿಸಿತ್ತು. ಆದರೆ, ಅಲ್ಲಿ ರಾಜಸ್ಥಾನ್ ರಾಯಲ್ಸ್ ಎದುರು ಸೋತು ಹೊರಬಿತ್ತು.
ಆರ್ಸಿಬಿಯ ಹೊರತಾಗಿ, ಕೋಲ್ಕತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳೂ ಇನ್ನೂ 2025ರ ನಾಯಕತ್ವ ಘೋಷಿಸಬೇಕಾಗಿದೆ.