ಮ್ಯಾಂಚೆಸ್ಟರ್: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ನ ಸ್ಟಾರ್ ಬ್ಯಾಟರ್ ಫಿಲ್ ಸಾಲ್ಟ್, ಕೇವಲ 39 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಇಂಗ್ಲೆಂಡ್ ಪರ ಅತಿವೇಗದ T20I ಶತಕ ಬಾರಿಸಿದ ಆಟಗಾರ ಎಂಬ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಆರಂಭಿಕ ಆಟಗಾರ ಜೋಸ್ ಬಟ್ಲರ್ ಅವರ ಪವರ್‌ಪ್ಲೇದಾಟದ ನಂತರ ಸಾಲ್ಟ್ ಈ ಸ್ಫೋಟಕ ಇನ್ನಿಂಗ್ಸ್ ಆಡಿದರು. ಸಾಲ್ಟ್ ಕಳೆದ ಐಪಿಎಲ್ನಲ್ಲಿ ಆರ್ಸಿಬಿ ಪರ ಆಡಿದ್ದರು.
2021ರಲ್ಲಿ ಪಾಕಿಸ್ತಾನದ ವಿರುದ್ಧ ಲಿಯಾಮ್ ಲಿವಿಂಗ್‌ಸ್ಟೋನ್ 42 ಎಸೆತಗಳಲ್ಲಿ ಬಾರಿಸಿದ್ದ ಶತಕದ ದಾಖಲೆಯನ್ನು ಸಾಲ್ಟ್ ಮುರಿದರು. ಈ ಮೂಲಕ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ ನಾಲ್ಕು ಶತಕಗಳನ್ನು ಪೂರೈಸಿದ ಆಟಗಾರರ ಪಟ್ಟಿಗೂ ಸೇರಿದ್ದಾರೆ. ಸಾಲ್ಟ್ 42 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರೆ, ಭಾರತದ ಸೂರ್ಯಕುಮಾರ್ ಯಾದವ್ 57 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು. ಸದ್ಯ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ರೋಹಿತ್ ಶರ್ಮಾ ತಲಾ 5 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು:
- ಗ್ಲೆನ್ ಮ್ಯಾಕ್ಸ್‌ವೆಲ್: 5 ಶತಕಗಳು (114 ಇನ್ನಿಂಗ್ಸ್)
- ರೋಹಿತ್ ಶರ್ಮಾ: 5 ಶತಕಗಳು (151 ಇನ್ನಿಂಗ್ಸ್)
- ಸೂರ್ಯಕುಮಾರ್ ಯಾದವ್: 4 ಶತಕಗಳು (80 ಇನ್ನಿಂಗ್ಸ್)
- ಫಿಲ್ ಸಾಲ್ಟ್: 4 ಶತಕಗಳು (42 ಇನ್ನಿಂಗ್ಸ್)
ಬಟ್ಲರ್ ಬಿರುಗಾಳಿ ಬ್ಯಾಟಿಂಗ್
ಸಾಲ್ಟ್‌ಗಿಂತ ಮೊದಲು ಕ್ರೀಸ್‌ಗೆ ಇಳಿದ ನಾಯಕ ಜೋಸ್ ಬಟ್ಲರ್ ಕೇವಲ 30 ಎಸೆತಗಳಲ್ಲಿ 83 ರನ್ ಚಚ್ಚಿದರು. ಇದರಲ್ಲಿ 18 ಎಸೆತಗಳ ಅರ್ಧಶತಕವೂ ಸೇರಿದ್ದು, ಇದು ಇಂಗ್ಲೆಂಡ್ ಪರ ಮೂರನೇ ವೇಗದ ಅರ್ಧಶತಕವಾಗಿದೆ. ಈ ಸ್ಫೋಟಕ ಆರಂಭಿಕ ಜೋಡಿಯು ಕೇವಲ 6.1 ಓವರ್‌ಗಳಲ್ಲಿ 101 ರನ್ ಕಲೆಹಾಕಿ, ದಕ್ಷಿಣ ಆಫ್ರಿಕಾದ ಬೌಲರ್‌ಗಳನ್ನು ದಂಗುಬಡಿಸಿತು.
ಬಟ್ಲರ್ 83 ರನ್‌ಗಳಿಗೆ ಔಟಾದರೂ, ಫಿಲ್ ಸಾಲ್ಟ್ ತಮ್ಮ ಆಟವನ್ನು ಮುಂದುವರೆಸಿ ದಾಖಲೆಯ ಶತಕದೊಂದಿಗೆ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು. ಈ ಮೂಲಕ ಇಂಗ್ಲೆಂಡ್ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದೆ.