ಮುಂಬೈ: ದೇಶದ ವಾಣಿಜ್ಯ ನಗರ ಎಂದೇ ಖ್ಯಾತಿ ಪಡೆದಿರುವ ಮಹಾರಾಷ್ಟ್ರದ ಮುಂಬೈ ನಗರದಲ್ಲಿ ವಾಯು ಗುಣಮಟ್ಟ ದಿನೇ ದಿನೇ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳನ್ನು ನಿಷೇಧಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಅದರಂತೆ ಮುಂಬೈ ಮಹಾನಗರದ ವ್ಯಾಪ್ತಿಯಲ್ಲಿ ಕೇವಲ ಎಲೆಕ್ಟ್ರಿಕ್(ವಿದ್ಯುತ್‌ಚಾಲಿತ) ಮತ್ತು ಸಿಎನ್‌ಜಿ(ದ್ರವೀಕೃತ ನೈಸರ್ಗಿಕ ಅನಿಲ) ವಾಹನಗಳಿಗೆ ಮಾತ್ರ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎನ್ನಲಾಗಿದೆ.
ಇದಕ್ಕಾಾಗಿ ರಾಜ್ಯ ಸರ್ಕಾರವು 7 ಸದಸ್ಯರ ಸಮಿತಿಯನ್ನು ರಚನೆ ಮಾಡಿದ್ದು, ಐಎಎಸ್ ಅಧಿಕಾರಿ ಸುಧೀರ್ ಕುಮಾರ್ ಶ್ರೀವಾಸ್ತವ ಅವರು ಈ ಸಮಿತಿಯ ನೇತೃತ್ವ ವಹಿಸಿದ್ದಾರೆ. ಈ ಸಮಿತಿಯು ಪೆಟ್ರೋಲ್-ಡೀಸೆಲ್ ವಾಹನ ನಿಷೇಧ ಹಾಗೂ ಇವಿ, ಸಿಎನ್‌ಜಿ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸುವ ಕುರಿತು ಅಧ್ಯಯನ ನಡೆಸಿ, 3 ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದೆ. ಈ ಸಮಿತಿಯು ಬೇರೆ ಬೇರೆ ಕ್ಷೇತ್ರಗಳ ತಜ್ಞರನ್ನು ಆಹ್ವಾನಿಸಿ, ಅವರ ಅಭಿಪ್ರಾಯಗಳನ್ನು ಸಂಗ್ರಹಿಸುವ ಅಧಿಕಾರವನ್ನು ಹೊಂದಿರಲಿದೆ.
ಮುಂಬೈ ನಗರದಲ್ಲಿ ಮಾಲಿನ್ಯ ಹೆಚ್ಚಾಾಗುತ್ತಿದ್ದು, ವಾಯು ಗುಣಮಟ್ಟ ತೀವ್ರ ಕಳಪೆ ಸ್ಥಿತಿಗೆ ತಲುಪುತ್ತಿದೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಜನವರಿ 9ರಂದು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ವಾಯು ಗುಣಮಟ್ಟ ಕುಸಿತವು ಜನರ ಜೀವನ ಗುಣಮಟ್ಟ, ಪರಿಸರ ಮತ್ತು ಅದರ ಸುಸ್ಥಿರತೆ ಮೇಲೆ ಆಗುತ್ತಿರುವ ಪ್ರತಿಕೂಲ ಪರಿಣಾಮಗಳ ಬಗ್ಗೆಯೂ ಗಮನ ಸೆಳೆದಿತ್ತು. ಟ್ರಾಾಫಿಕ್ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಏನು ಕ್ರಮ ಕೈಗೊಳ್ಳುತ್ತೀರಿ ಎಂದೂ ಪ್ರಶ್ನಿಸಿ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. ಇದೇ ವೇಳೆ, ಬಾಲಿವುಡ್ ನಟಿ, ಪರಿಸರ ಅಡ್ವೊಕೇಟ್ ದಿಯಾ ಮಿರ್ಜಾ ಅವರೂ ನಗರದಲ್ಲಿನ ವಾಯು ಮಾಲಿನ್ಯ ಸಮಸ್ಯೆ ಪರಿಹರಿಸುವಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಇತ್ತೀಚೆಗೆ ಮನವಿ ಮಾಡಿದ್ದರು. ಪ್ರಸ್ತುತ ಮುಂಬೈನಲ್ಲಿ 48 ಲಕ್ಷ ವಾಹನಗಳು ನೋಂದಣಿಯಾಗಿವೆ.