ಬೆಂಗಳೂರು: ನಾಲ್ಕು ಸೆಕ್ಷನ್ ಗಳಲ್ಲಿ ಎಫ್ಐಆರ್ ದಾಖಲಿಸುವ ಮುನ್ನ ಮೇಲಾಧಿಕಾರಿಗಳ ಅನುಮತಿ ಕಡ್ಡಾಯವೆಂದು ಪೊಲೀಸ್ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
BNS 304, 103(2), 111, 113(b)ಅಡಿ ಕೇಸ್ ದಾಖಲಿಸಲು ಮೊದಲು ಕಡ್ಡಾಯವಾಗಿ ತನಿಖಾಧಿಕಾರಿ ಮೇಲಾಧಿಕಾರಿಗಳಿಗೆ ತಿಳಿಸಿ ಅನುಮತಿ ಪಡೆಯಬೇಕು ಎಂದು ಡಿಜಿಪಿ ಎಂ.ಎ ಸಲೀಂ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ.
ದೂರಿನಲ್ಲಿ ನಾಲ್ಕು ಸೆಕ್ಷನ್ ಅಂಶಗಳ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲಿಸಿ ಅನುಮೋದನೆ ನೀಡಬೇಕು. ನಂತರ ಈ ಸೆಕ್ಷನ್ ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
304, 103(2), 111 ಗೆ ಜಿಲ್ಲಾ ಮಟ್ಟದಲ್ಲಿ ಎಎಸ್ ಪಿ ಮತ್ತು ಕಮೀಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿ ಮಟ್ಟದ ಅಧಿಕಾರಿಗಳು ಅನುಮತಿ ನೀಡಬೇಕು. ಸೆಕ್ಷನ್ 113(b)ಗೆ ಜಿಲ್ಲಾ ಮಟ್ಟದಲ್ಲಿ ಎಸ್ ಪಿ ಮತ್ತು ಕಮೀಷನರ್ ವ್ಯಾಪ್ತಿಯಲ್ಲಿ ಡಿಸಿಪಿ ಒಳಗೊಂಡಂತೆ ಮೇಲಾಧಿಕಾಗಳ ಅನುಮತಿ ಪಡೆಯಬೇಕು.
ತುರ್ತು ಕಾರ್ಯ ನಿಮಿತ್ತ ಮೌಖಿಕವಾಗಿ ಆದೇಶ ಪಡೆದ ಬಳಿಕ 24 ಗಂಟೆಯೊಳಗೆ ಲಿಖಿತ ಅನುಮತಿ ಪಡೆಯಬೇಕು ಎಂದು ಆದೇಶಿಸಲಾಗಿದೆ.
ಈ ನಾಲ್ಕು ಸೆಕ್ಷನ್ ಗಳು ವಿವರಣೆಗಳೇನು ? :
304 – ಬಲವಂತವಾಗಿ ಒಬ್ಬ ವ್ಯಕ್ತಿಯಿಂದ ಕಸಿದುಕೊಳ್ಳುವುದು, ಆಸ್ತಿ, ಬೆಲೆಬಾಳುವ ವಸ್ತುಗಳನ್ನ ಕಸಿದುಕೊಳ್ಳುವುದು.
103(2) – ಐದು ಅಥವಾ ಅದಕ್ಕಿಂತ ಹೆಚ್ಚು ಮಂದಿಯ ಗುಂಪಿನಿಂದ ಹಲ್ಲೆ ನಡೆಸಿ ಕೊಲೆ ಮಾಡುವುದು. ಜಾತಿ, ಧರ್ಮ, ಸಮುದಾಯ, ಭಾಷೆ, ಲೈಂಗಿಕ ದೌರ್ಜನ್ಯ ವಿಚಾರದ ಆಧಾರದ ಮೇಲೆ ಗುಂಪು ಘರ್ಷಣೆಯಾಗಿ ಕೊಲೆ.
111 ಬಿಎನ್ಎಸ್ – ಸಂಘಟಿತ ಅಪರಾಧ. ಇಬ್ಬರು ಅಥವಾ ಸಿಂಡಿಕೇಟ್ ಅಥವಾ ಗ್ಯಾಂಗ್ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿ ಅಪರಾಧ ಎಸಗುವುದು.
113(b) – ಭಯೋತ್ಪಾದಕ ಕೃತ್ಯಗಳ ಸಂಬಂಧ ಪ್ರಕರಣ ದಾಖಲಿಸುವ ಸಂದರ್ಭ ಈ ನಾಲ್ಕು ಸೆಕ್ಷನ್ ಗಳಲ್ಲಿ ಕೇಸ್ ದಾಖಲಿಸುವ ಮುನ್ನಾ ಅನುಮತಿ ಪಡೆಯುವುದು ಕಡ್ಡಾಯಗೊಳಿಸಲಾಗಿದೆ.


















