ಬೆಳಗಾವಿ: ರಾಜ್ಯದಲ್ಲಿನ ಬಿಪಿಎಲ್ ಕಾರ್ಡ್ ದಾರರ ಪೈಕಿ ಶೇ. 20ರಷ್ಟು ಅನರ್ಹರಿದ್ದಾರೆ ಎಂದು ಆಹಾರ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
ಜೆಡಿಎಸ್ ಸದಸ್ಯ ಕೆ.ಇ.ತಿಪ್ಪೇಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿನ 25 ಲಕ್ಷ ಎಪಿಎಲ್ ಕಾರ್ಡ್ ದಾರರ ಪೈಕಿ ಕೇವಲ 1 ಲಕ್ಷ ಜನ ಮಾತ್ರ ಪಡಿತರ ಪಡೆಯುತ್ತಿದ್ದಾರೆ. ಕೇಂದ್ರದ ಆದೇಶದ ಮೇರೆಗೆ ಹೊಸದಾಗಿ ಎಪಿಎಲ್ ಕಾರ್ಡುಗಳನ್ನು ವಿತರಿಸುವುದನ್ನು ನಿಲ್ಲಿಸಲಾಗಿದೆ ಎಂದಿದ್ದಾರೆ.
ರಾಜ್ಯದಲ್ಲಿ ಬಿಪಿಎಲ್, ಎಪಿಎಲ್ ಸೇರಿದಂತೆ ಒಟ್ಟು 5.29 ಕೋಟಿ ಕಾರ್ಡುದಾರರಿದ್ದಾರೆ. ವಾರ್ಷಿಕ 1.20 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರು ಬಿಪಿಎಲ್ ವ್ಯಾಪ್ತಿಯಲ್ಲಿ ಬರಲಿದ್ದಾರೆ. ಆದರೆ, ಬಡತನ ರೇಖೆಗಿಂತ ಕಡಿಮೆ ಆದಾಯ ಹೊಂದಿರುವ ಓರ್ವ ಕಾರ್ಡುದಾರರಿಗೂ ಅನ್ಯಾಯ ಆಗಲು ಬಿಡುವುದಿಲ್ಲ.
ಅಕ್ರಮ ಪಡಿತರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ವ್ಯಕ್ತಿಗಳ ವಿರುದ್ಧ ಆರೋಪ ಸಾಬೀತಾದಲ್ಲಿ ನ್ಯಾಯಾಲಯದ ಆದೇಶದಂತೆ ಕಾನೂನು ಕ್ರಮ ವಹಿಸಲಾಗುವುದು. 2021ರಿಂದ 2023ರ ಮೇ ಅವಧಿಯಲ್ಲಿ 3,35,463 ಅನರ್ಹ ಆದ್ಯತಾ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲಾಗಿದೆ. ಇದರಿಂದ 13.51 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು ಹೇಳಿದ್ದಾರೆ. 2024ನೇ ಸಾಲಿನಲ್ಲಿ 213 ಎಫ್ ಐಆರ್ ದಾಖಲಿಸಲಾಗಿದೆ. ಈ ಪೈಕಿ 238 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದಿದ್ದಾರೆ.