ಇತ್ತೀಚೆಗೆ ಜನರು ಗೂಗಲ್ ಮ್ಯಾಪ್ ನ್ನು ಅತಿಯಾಗಿ ನಂಬಿ ಬಿಟ್ಟಿದ್ದಾರೆ. ಎಲ್ಲಿಯೇ ಹೋದರೂ ಗೂಗಲ್ ಮ್ಯಾಪ್ ಮೂಲಕ ಹೋಗುತ್ತಾರೆ. ಆಗಾಗ ಗೂಗಲ್ ಮ್ಯಾಪ್ ನಿಂದ ಅವಾಂತರಗಳ ನಡೆದಿರುವುದು ಬೆಳಕಿಗೆ ಬರುತ್ತಲೇ ಇವೆ. ಈಗ ಈ ಸಾಲಿಗೆ ಮತ್ತೊಂದು ಪ್ರಕರಣ ಸೇರಿದೆ.
ಗೂಗಲ್ ಮ್ಯಾಪ್ ನಂಬಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಕಾರಿನ ಚಾಲಕ ಗೂಗಲ್ ಮ್ಯಾಪ್ ನೋಡಿಕೊಂಡು ಕಾರು ಚಲಾಯಿಸುತ್ತಿದ್ದ. ಆತನೊಂದಿಗೆ ಸ್ನೇಹಿತರು ಕೂಡ ಇದ್ದರು. ಗೂಗಲ್ ತೋರಿಸಿದ್ದನ್ನು ನಂಬಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯನ್ನು ಹತ್ತಿದ್ದಾರೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ಸೇತುವೆ ಕಾಮಗಾರಿ ಅಲ್ಲಿಗೇ ನಿಂತಿದೆ. ಆದರೆ, ಇದು ಅವರಿಗೆ ಕಂಡಿಲ್ಲ. ಹೀಗಾಗಿ ಕಾರು ನದಿಗೆ ಬಿದ್ದಿದೆ. ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ.
ಉತ್ತರ ಪ್ರದೇಶದ ಬರೇಲಿ ಮತ್ತು ಬುಡೌನ್ ಜಿಲ್ಲೆಗಳ ನಡುವಿನ ಗಡಿಯಲ್ಲಿರುವ ಫರೀದ್‌ಪುರ ಮತ್ತು ದತಗಂಜ್‌ಗೆ ಸಂಪರ್ಕ ಕಲ್ಪಿಸುವ ರಾಮಗಂಗಾ ನದಿಯ ಮೇಲಿನ ಅಪೂರ್ಣ ಸೇತುವೆಯಿಂದ ಕಾರು ಉರುಳಿ ಬಿದ್ದಿದೆ. ನಿರ್ಮಾಣ ಹಂತದ ಸೇತುವೆ ಮೇಲೆ ಬ್ಯಾರಿಕೇಡ್ ಹಾಕದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.