ಮುಂಬೈ: ‘ಪವಿತ್ರ ರಿಶ್ತಾ’ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ಖ್ಯಾತ ನಟಿ ಪ್ರಿಯಾ ಮರಾಠೆ ಅವರು ಭಾನುವಾರ ಕೊನೆಯುಸಿರೆಳೆದಿದ್ದಾರೆ. ಅವರಿಗೆ 38 ವರ್ಷ ವಯಸ್ಸಾಗಿತ್ತು. ಕಳೆದ ಒಂದು ವರ್ಷದಿಂದ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದ ಅವರು ಇಂದು ಮುಂಜಾನೆ ಮುಂಬೈನಲ್ಲಿ ಇಹಲೋಕ ತ್ಯಜಿಸಿದರು.
ಅನೇಕ ಹಿಂದಿ ಮತ್ತು ಮರಾಠಿ ಟಿವಿ ಶೋಗಳಲ್ಲಿ ನಟಿಸಿದ್ದ ಪ್ರಿಯಾ ಮರಾಠೆ ಅವರು, ‘ಯಾ ಸುಖನೋಯಾ’ ಎಂಬ ಮರಾಠಿ ಧಾರಾವಾಹಿಯ ಮೂಲಕ ಅಭಿನಯ ಲೋಕಕ್ಕೆ ಪಾದಾರ್ಪಣೆ ಮಾಡಿದರು. ನಂತರ ‘ಕಸಮ್ ಸೆ’, ‘ಕಾಮಿಡಿ ಸರ್ಕಸ್’, ‘ಬಡೆ ಅಚ್ಛೇ ಲಗ್ತೆ ಹೈ’, ಮತ್ತು ‘ಭಾರತ್ ಕಾ ವೀರ್ ಪುತ್ರ – ಮಹಾರಾಣಾ ಪ್ರತಾಪ್’ ನಂತಹ ಜನಪ್ರಿಯ ಹಿಂದಿ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. ಝೀ ಟಿವಿಯಲ್ಲಿ ಪ್ರಸಾರವಾದ ‘ಪವಿತ್ರ ರಿಶ್ತಾ’ದಲ್ಲಿನ ಅವರ ‘ವರ್ಷಾ’ ಪಾತ್ರವು ಅವರಿಗೆ ಹೆಚ್ಚಿನ ಖ್ಯಾತಿಯನ್ನು ತಂದುಕೊಟ್ಟಿತ್ತು.
ಪ್ರಿಯಾ ಅವರು ‘ಹಮ್ನೆ ಜೀನಾ ಸೀಖ್ ಲಿಯಾ’ ಎಂಬ ಹಿಂದಿ ಚಲನಚಿತ್ರ ಮತ್ತು ‘ತಿ ಆನಿ ಇತರ’ ಎಂಬ ಮರಾಠಿ ಚಲನಚಿತ್ರದಲ್ಲಿಯೂ ನಟಿಸಿದ್ದರು. ಅವರು 2012ರಲ್ಲಿ ನಟ ಶಂತನು ಮೊಘೆ ಅವರನ್ನು ವಿವಾಹವಾಗಿದ್ದರು. ಅವರ ಅಕಾಲಿಕ ನಿಧನಕ್ಕೆ ಕಿರುತೆರೆ ಮತ್ತು ಚಲನಚಿತ್ರ ರಂಗದ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.