ಪಂಜಾಬ್ ರುದ್ಧ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ ಉತ್ತಮ ಮೊತ್ತ ಕಲೆ ಹಾಕಿದೆ. ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Punjab Kings Vs Royal Challengers Bengaluru) ತಂಡ 7 ವಿಕೆಟ್ ಕಳೆದುಕೊಂಡು 241 ರನ್ ಗಳಿಸಿತು.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಹಾಗೂ ರಜತ್ ಪಾಟಿದಾರ್ (Rajat Patidar) ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಈ ಜೋಡಿ 3ನೇ ವಿಕೆಟ್ ಗೆ 76 ರನ್ ಗಳ ಜೊತೆಯಾಟ ನೀಡಿತು. ಸ್ಫೋಟಕ ಬ್ಯಾಟಿಂಗ್ ಮಾಡಿದ ರಜತ್ ಕೇವಲ 23 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 3 ಬೌಂಡರಿ ಸಹಿತ 55 ರನ್ ಗಳಿಸಿದರು. ಕ್ಯಾಚ್ ಡ್ರಾಪ್ ಆಗಿದ್ದರಿಂದಾಗಿ ಜೀವದಾನದ ಲಾಭ ಪಡೆದ ಪಾಟಿದರ್ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಈ ಮೂಲಕ ದೊಡ್ಡ ದಾಖಲೆಯು ಪಾಟಿದಾರ್ ಹೆಸರಿನಲ್ಲಿ ಮೂಡಿತು.
ರಜತ್ ಪಾಟಿದಾರ್ 21 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಮೂರು ಅರ್ಧಶತಕಗಳನ್ನು ಬಾರಿಸಿದ ಆರ್ ಸಿಬಿಯ ಏಕೈಕ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಈ ಎಲ್ಲಾ ಮೂರು ಅರ್ಧಶತಕಗಳು ಈ ಸೀಸನ್ನಲ್ಲೇ ಬಂದಿವೆ. ರಜತ್, ಹೈದರಾಬಾದ್ ವಿರುದ್ಧ ಪಾಟಿದಾರ್ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಕೆಕೆಆರ್ ವಿರುದ್ಧ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಈಗ ಪಂಜಾಬ್ ವಿರುದ್ಧ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ. ಈ ಸೀಸನ್ ನಲ್ಲಿ ಪಾಟಿದಾರ್ 4 ಅರ್ಧ ಶತಕ ಸಿಡಿಸಿದ್ದಾರೆ.