ಮೈಸೂರು: ಸಂಸದ ಸುನೀಲ್ ಬೋಸ್ ಮೈಸೂರಿನ ಚಾಮುಂಡೇಶ್ವರಿ ತಾಯಿ ಗರ್ಭ ಗುಡಿಯಲ್ಲಿಯೇ ಕೆಎಎಸ್ ಅಧಿಕಾರಿ ಹಣೆಗೆ ಕುಂಕುಮ ಹಚ್ಚುವುದರ ಮೂಲಕ ಚರ್ಚೆಗೆ ಕಾರಣವಾಗಿದ್ದಾರೆ.
ಆಷಾಢ ಮಾಸದ ಮೂರನೇ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಅಧಿಕಾರಿ ಹಾಗೂ ಸಂಸದ ಸುನೀಲ್ ಇಬ್ಬರೂ ಜೊತೆಯಾಗಿ ಬಂದಿದ್ದರು. ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿಯಾಗಿರುವ ಸವಿತಾ ಅವರ ಹಣೆಗೆ ಸಂಸದ ಸುನೀಲ್‌ಬೋಸ್ ಕುಂಕುಮ ಇರಿಸಿದ್ದಾರೆ. ಇಬ್ಬರೂ ಸೇರಿ ಗರ್ಭ ಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆ ನೆರವೇರಿಸುವ ವೇಳೆ ಸುನೀಲ್ ಬೋಸ್ ಹಾಗೂ ಕಾಂಗ್ರೆಸ್‌ನ ಅನೇಕ ಬೆಂಬಲಿಗರು ಹಾಜರಿದ್ದರು. ಅವರ ಸಮ್ಮುಖದಲ್ಲಿಯೇ ಹಣೆಗೆ ಸುನೀಲ್‌ಬೋಸ್ ತಿಲಕ ಇರಿಸಿದ್ದಾರೆ. ಇದು ತೀವ್ರ ಚರ್ಚೆಗೆ ಕಾರಣವಾಗಿದೆ.
ಆದರೆ, ಸಂಸದರ ನಡೆಗೆ ಮಹಿಳಾ ಅಧಿಕಾರಿ ವಿರೋಧ ವ್ಯಕ್ತಪಡಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಸಾರ್ವಜನಿಕರು ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಮಗೆ ಮದುವೆ ಆಗಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅಫಿಡವಿಟ್ ಸಲ್ಲಿಸಿದ್ದರು. ಈ ಬಗ್ಗೆ ಚಾಮರಾಜನಗರ ಜಿಲ್ಲೆಯ ಬಿಜೆಪಿ ಸದಸ್ಯರು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದರು. ಸುನೀಲ್ ಬೋಸ್ ಅವರಿಗೆ ಮದುವೆಯಾಗಿದೆ. ಆದರೆ ಅವರು ಅಫಿಡವಿಟ್ ನಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.
ಸುನೀಲ್‌ಬೋಸ್ ಹಾಗೂ ಸವಿತಾ ಜೊತೆಯಲ್ಲಿ ಇರುವ ಪೋಟೋಗಳನ್ನು ಬಿಜೆಪಿ ಸದಸ್ಯರು ಚುನಾವಣಾ ಆಯೋಗಕ್ಕೆ ಪುರಾವೆಯಾಗಿ ನೀಡಿದ್ದರು. ವೈವಾಹಿಕ ಜೀವನದ ಮಾಹಿತಿಯನ್ನು ಸುನೀಲ್ ಬೋಸ್ ಮರೆಮಾಚಿರುವುದು ಅನುಮಾನಾಸ್ಪದವಾಗಿದೆ. ಸವಿತಾ ಮತ್ತು ಸುನೀಲ್ ಬೋಸ್ ಮದುವೆಯಾಗಿದ್ದು, ಅವರಿಗೆ ಆರು ವರ್ಷದ ಹೆಣ್ಣು ಮಗು ಕೂಡ ಇದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು.
ಈಗ ಇಬ್ಬರೂ ಸನ್ನಿಧಿಯಲ್ಲಿ ಬಹಿರಂಗವಾಗಿಯೇ ಸವಿತಾ ಅವರ ಹಣೆಗೆ ಕುಂಕುಮ ಇರಿಸಿರುವ ಫೋಟೋಗಳು ವೈರಲ್ ಆಗಿವೆ. ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಮತ್ತೊಮ್ಮೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ಮುಂದಾಗಿದ್ದಾರೆ. ಡಾ ಎಚ್‌ಸಿ ಮಹದೇವಪ್ಪ ಅವರ ಮಗನಾಗಿರುವ 42 ವರ್ಷದ ಸುನೀಲ್ ಬೋಸ್ ಚಾಮರಾಜನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.