ಬೆಂಗಳೂರು : ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್ಒ) ಉದ್ಯೋಗಿಗಳ ಪಿಂಚಣಿ ಯೋಜನೆ ಯೋಜನೆ 1995ರ ಅನ್ವಯ (ಇಪಿಎಸ್-95) ಸಂಘಟಿತ ವಲಯದ ಖಾಸಗಿ ಉದ್ಯೋಗಿಗಳಿಗೂ ಮಾಸಿಕ 1 ಸಾವಿರ ರೂಪಾಯಿ ಪಿಂಚಣಿ ನೀಡಲಾಗುತ್ತದೆ. ಈಗ ಈ ಪಿಂಚಣಿ ಮೊತ್ತವನ್ನು ಏರಿಕೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಂಸದೀಯ ಸಮಿತಿಯೊಂದು ಶಿಫಾರಸು ಮಾಡಿದೆ. ಹಾಗಾಗಿ, ಖಾಸಗಿ ಕಂಪನಿಗಳ ನಿವೃತ್ತ ನೌಕರರಿಗೆ ಮಾಸಿಕ 7,500 ರೂ. ಪಿಂಚಣಿ ಬೇಡಿಕೆಗೆ ಬಲ ಬಂದಂತಾಗಿದೆ.
ಇಪಿಎಸ್ 95 ಸಂಘಟಿತ ವಲಯದ ಕಾರ್ಮಿಕರಿಗಾಗಿ ಜಾರಿಗೆ ತಂದ ಅತ್ಯಂತ ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಇದರ ಅಡಿಯಲ್ಲಿ ಈಗಾಗಲೇ ಮಾಸಿಕ 1 ಸಾವಿರ ರೂಪಾಯಿ ಪಿಂಚಣಿ ನೀಡಲಾಗುತ್ತಿದೆ. ಆದರೆ, ಈ ಮೊತ್ತವನ್ನು 7,500 ರೂಪಾಯಿಗೆ ಏರಿಕೆ ಮಾಡಬೇಕು ಎಂಬುದು ಪಿಂಚಣಿದಾರರ ಹಲವು ವರ್ಷಗಳ ಬೇಡಿಕೆಯಾಗಿದೆ. ಇದರ ಬೆನ್ನಲ್ಲೇ, ಈಗ ನೀಡುತ್ತಿರುವ 1 ಸಾವಿರ ರೂ. ಪಿಂಚಣಿ ಕಡಿಮೆಯಾಗಿದೆ. ಇದನ್ನು ಏರಿಸಬೇಕು ಎಂದು ಸಂಸದೀಯ ಸಮಿತಿಯು ಶಿಫಾರಸು ಮಾಡಿದೆ.
ಖಾಸಗಿ ಕಂಪನಿಗಳ ಉದ್ಯೋಗಿಗಳು ತಮ್ಮ ಸೇವಾವಧಿಯಲ್ಲಿ ನಿರಂತರವಾಗಿ ನೀಡುವ ಕೊಡುಗೆಯ ಆಧಾರದ ಮೇಲೆ, ಅವರು ನಿವೃತ್ತರಾದಾಗ ಆರ್ಥಿಕ ಭದ್ರತೆ ಒದಗಿಸುವುದು ಯೋಜನೆಯ ಗುರಿಯಾಗಿದೆ. ಈ ಮೊತ್ತವು ಕಡಿಮೆಯಾಗಿರುವುದರಿಂದ ಏರಿಕೆ ಮಾಡಬೇಕು ಎಂಬುದು ಪಿಂಚಣಿದಾರರ ಒತ್ತಾಯವಾಗಿದೆ. ಪಿಂಚಣಿ ಮೊತ್ತವನ್ನು ಏರಿಕೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಕೂಡ ಸರ್ಕಾರಕ್ಕೆ ಸೂಚಿಸಿದೆ. ಹಾಗಾಗಿ, ಸರ್ಕಾರವು ಈ ದಿಸೆಯಲ್ಲಿ ನಿರ್ಧಾರ ಪ್ರಕಟಿಸುವ ನಿರೀಕ್ಷೆ ಇದೆ.
ಈಗಿನ ಹಣದ ಹಂಚಿಕೆ ಹೇಗಿದೆ?
ಯಾವುದೇ ಒಬ್ಬ ಉದ್ಯೋಗಿಯ ವೇತನದ ಒಂದು ಭಾಗ ಈ ಪಿಂಚಣಿ ನಿಧಿಗೆ ಹೇಗೆ ಹೋಗುತ್ತದೆ ಎಂಬುದರ ಮಾಹಿತಿ ಹೀಗಿದೆ…
ನೌಕರನ ಪಾಲು: ನಿಮ್ಮ ಮೂಲ ವೇತನದ (Basic + DA) 12% ಪೂರ್ತಿಯಾಗಿ EPF (ಭವಿಷ್ಯ ನಿಧಿ) ಖಾತೆಗೆ ಹೋಗುತ್ತದೆ.
ಮಾಲೀಕನ ಪಾಲು: ಮಾಲೀಕರು ನೀಡುವ 12% ಮೊತ್ತದಲ್ಲಿ 8.33% ಭಾಗ EPS (ಪಿಂಚಣಿ ಯೋಜನೆ) ಗೆ ಹೋಗುತ್ತದೆ.
ಉಳಿದ 3.67% ಭಾಗ ಇಪಿಎಫ್ ಖಾತೆಗೆ ಜಮೆಯಾಗುತ್ತದೆ.
ಸರ್ಕಾರದ ಪಾಲು: ಕೇಂದ್ರ ಸರ್ಕಾರವು ನೌಕರನ ವೇತನದ 1.16%ರಷ್ಟು ಹಣವನ್ನು ಈ ಪಿಂಚಣಿ ನಿಧಿಗೆ ಕೊಡುಗೆಯಾಗಿ ನೀಡುತ್ತದೆ.
ಇದನ್ನೂ ಓದಿ : ಯುಗಾದಿಯಂದೇ ಕಾಲಭೈರವನ ಸನ್ನಿಧಿ ಮುಂದೆ ವಾಮಾಚಾರ.. ಬೆಚ್ಚಿಬಿದ್ದ ಸ್ಥಳೀಯರು!



















