ಪ್ಯಾರಿಸ್ ಒಲಿಂಪಿಕ್ಸ್ ಅಧಿಕೃತವಾಗಿ ಜುಲೈ 26ರಿಂದ ಆರಂಭವಾಗಲಿದ್ದು, ಇದಕ್ಕೂ ಮುನ್ನ ಹಲವು ಕ್ರೀಡೆಗಳು ನಡೆಯುತ್ತಿದ್ದು, ಭಾರತ ತಂಡ ಅರ್ಚರಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಭಾರತದ ಮಹಿಳಾ ಮತ್ತು ಪುರುಷರ ಎರಡೂ ತಂಡಗಳು ಆರ್ಚರಿಯಲ್ಲಿ ಭಾಗವಹಿಸುತ್ತಿವೆ. ಇದರಲ್ಲಿ ಮೊದಲಿಗೆ ನಡೆದ ಅರ್ಹತಾ ರ‍್ಯಾಂಕಿಂಗ್ ಸುತ್ತಿನಲ್ಲಿ ಭಾರತದ ಮಹಿಳಾ ಆರ್ಚರಿ ತಂಡ ಆರಂಭಿಕ ಸುತ್ತಿನಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಇದರೊಂದಿಗೆ ತಂಡ ಕ್ವಾರ್ಟರ್‌ಫೈನಲ್ ಗೆ ನೇರ ಅರ್ಹತೆ ಗಿಟ್ಟಿಸಿಕೊಂಡಿದೆ. ಕ್ವಾರ್ಟರ್ ಫೈನಲ್ ಸುತ್ತಿಗೆ ಭಾರತ ಮಾತ್ರವಲ್ಲದೆ ದಕ್ಷಿಣ ಕೊರಿಯಾ, ಚೀನಾ ಮತ್ತು ಮೆಕ್ಸಿಕೊ ತಂಡಗಳು ಕೂಡ ಅರ್ಹತೆ ಪಡೆದಿವೆ.
ಅರ್ಹತಾ ರ‍್ಯಾಂಕಿಂಗ್ ಸುತ್ತಿನಲ್ಲಿ ಭಾರತದ ದೀಪಿಕಾ ಕುಮಾರಿ, ಅಂಕಿತಾ ಭಕತ್, ಭಜನ್ ಕೌರ್ ಉತ್ತಮ ಪ್ರದರ್ಶನ ನೀಡಿದರು. ಇದರಲ್ಲಿ 666 ವೈಯಕ್ತಿಕ ಸ್ಕೋರ್ ಕಲೆಹಾಕಿದ ಅಂಕಿತಾ ಭಕತ್ 11ನೇ ಸ್ಥಾನ ಪಡೆದರೆ, ಭಜನ್ ಕೌರ್ 659 ವೈಯಕ್ತಿಕ ಸ್ಕೋರ್ ಮತ್ತು ದೀಪಿಕಾ ಕುಮಾರಿ 658 ವೈಯಕ್ತಿಕ ಸ್ಕೋರ್ ಕಲೆಹಾಕುವುದರೊಂದಿಗೆ ಕ್ರಮವಾಗಿ 22 ಮತ್ತು 23ನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಭಾರತದ ಒಟ್ಟು ಸ್ಕೋರ್ 1983 ಆಗಿದ್ದು, ಭಾರತ ಮಹಿಳಾ ತಂಡ ನಾಲ್ಕನೇ ಸ್ಥಾನ ಪಡೆಯುವಂತಾಗಿದೆ.

ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಭಾರತ ಮಹಿಳಾ ತಂಡವು ಜುಲೈ 28 ರಂದು ಫ್ರಾನ್ಸ್ ಅಥವಾ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ಭಾರತವನ್ನು ಹೊರತುಪಡಿಸಿ ಮೊದಲ ಮೂರು ಸ್ಥಾನಗಳಲ್ಲಿರುವ ದಕ್ಷಿಣ ಕೊರಿಯಾ, ಚೀನಾ ಮತ್ತು ಮೆಕ್ಸಿಕೊ ಮಹಿಳಾ ತಂಡಗಳು ಕ್ರಮವಾಗಿ 2046, 1996 ಮತ್ತು 1986 ಅಂಕಗಳನ್ನು ಕಲೆಹಾಕಿವೆ. ಅತ್ಯಧಿಕ 2046 ಅಂಕ ಕಲೆಹಾಕಿರುವ ದಕ್ಷಿಣ ಕೊರಿಯಾ ತಂಡ ಅರ್ಹತಾ ರ‍್ಯಾಂಕಿಂಗ್ ಸುತ್ತಿನಲ್ಲಿ ಮೊದಲ ಸ್ಥಾನ ಪಡೆದಿದೆ.
ಕ್ವಾರ್ಟರ್ ಫೈನಲ್ ನಲ್ಲಿ ದಕ್ಷಿಣ ಕೊರಿಯಾ vs ಅಮೆರಿಕ/ಚೈನೀಸ್ ತೈಪೆ, ಚೀನಾ vs ಇಂಡೋನೇಷ್ಯಾ/ಮಲೇಷ್ಯಾ, ಮೆಕ್ಸಿಕೋ vs ಜರ್ಮನಿ/ಗ್ರೇಟ್ ಬ್ರಿಟನ್, ಭಾರತ vs ಫ್ರಾನ್ಸ್/ನೆದರ್ಲೆಂಡ್ಸ್ ಮಧ್ಯೆ ಫೈಟ್ ನಡೆಯಲಿದೆ.