ಬೆಂಗಳೂರು: ಪೋಷಕರೇ, ನಿಮ್ಮ ಮಗುವಿಗೆ ಐದು ವರ್ಷ ತುಂಬಿದೆಯೇ? ಹಾಗಾದ್ರೆ, ಕೂಡಲೇ ನೀವು ಮಗುವಿನ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು. ಹೌದು, ನಿಮ್ಮ ಮಗುವಿನ ಆಧಾರ್ ಕಾರ್ಡ್ ರದ್ದಾಗಬಾರದು ಎಂದರೆ, ಕೂಡಲೇ ಅದರ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಬೇಕು ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆದೇಶ ಹೊರಡಿಸಿದೆ.
ಮಕ್ಕಳಿಗೆ ಆಧಾರ್ ಏಕೆ ಪ್ರಮುಖ?
ಶಾಲಾ ದಾಖಲಾತಿ, ವಿದ್ಯಾರ್ಥಿವೇತನ, ನಗದು ವರ್ಗಾವಣೆ ಯೋಜನೆಗಳಂತಹ ಪ್ರಯೋಜನಗಳನ್ನು ಪಡೆಯಲು ಆಧಾರ್ ಬಯೋಮೆಟ್ರಿಕ್ ಅಪ್ ಡೇಟ್ ಆಗಿರುವುದು ಅವಶ್ಯಕವಾಗಿದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸುವಾಗ ಅವರ ಬಯೋಮೆಟ್ರಿಕ್ ವಿವರಗಳನ್ನು ತೆಗೆದುಕೊಂಡಿರುವುದಿಲ್ಲ. ಏಕೆಂದರೆ ಅವರ ಕೈರೇಖೆಗಳು ಅಷ್ಟಾಗಿ ಸ್ಪಷ್ಟವಾಗಿರುವುದಿಲ್ಲ. ಆದ್ದರಿಂದ ಒಮ್ಮೆ ಮಗುವಿಗೆ 5 ವರ್ಷ ದಾಟಿದರೆ ಆಧಾರ್ ಕಾರ್ಡ್ ಅಪ್ ಡೇಟ್ ಮಾಡಬೇಕಾಗುತ್ತದೆ.
ಮಕ್ಕಳ ಕಣ್ಣಿನ ಗುರುತು ಮತ್ತು ಬೆರಳಚ್ಚುಗಳನ್ನು ನೀಡುವ ಬಯೋಮೆಟ್ರಿಕ್ ಮೂಲಕ ಅಪ್ ಡೇಟ್ ಮಾಡಬೇಕು. ಬಳಿಕ 15 ವರ್ಷವಾದ ಮೇಲೆ ಇನ್ನೊಮ್ಮೆ ಅಪ್ ಡೇಟ್ ಮಾಡಿಸಬೇಕು. ಇಲ್ಲದಿದ್ದರೆ ಮುಂದೆ ಕೆಲವೊಂದು ಕೆಲಸಗಳಿಗೆ ತೊಂದರೆ ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಗುವಿಗೆ 5 ರಿಂದ 7 ವರ್ಷವಾಗಿದ್ದರೆ ಉಚಿತವಾಗಿ ಕೂಡಲೇ ಇದನ್ನು ಸಮೀಪದ ಕೇಂದ್ರಗಳಿಗೆ ಹೋಗಿ ಅಪ್ಡೇಟ್ ಮಾಡಿಸಿಕೊಳ್ಳಬಹುದು. ಇದು ಬಯೋಮೆಟ್ರಿಕ್ ಆಗಿರುವ ಕಾರಣ, ಮಗುವಿನ ಬೆರಳಚ್ಚು ಮತ್ತು ಕಣ್ಣಿನ ಸ್ಕ್ಯಾನ್ ಮಾಡುವುದರಿಂದ ಆಧಾರ್ ಕೇಂದ್ರಗಳಲ್ಲಿಯೇ ಹೋಗಿ ಮಾಡಿಸಬೇಕು.
ಆಧಾರ್ ಅಪ್ ಡೇಟ್ ಮಾಡಿಸುವುದು ಹೇಗೆ?
- ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ.
- ಮಗುವಿನ ಆಧಾರ್ ಕಾರ್ಡ್, ಜನನ ಪ್ರಮಾಣಪತ್ರ ಅಥವಾ ಶಾಲಾ ಐಡಿ, ಪೋಷಕರ ಆಧಾರ್/ಮೊಬೈಲ್ ಲಿಂಕ್ ದಾಖಲೆಗಳು ತೆಗೆದುಕೊಳ್ಳಿ.
- ನವೀಕರಣ ಫಾರ್ಮ್ ಭರ್ತಿ ಮಾಡಿ ಮತ್ತು ಮಗುವಿನ ಹೊಸ ಬಯೋಮೆಟ್ರಿಕ್ ಡೇಟಾ (ಬೆರಳಚ್ಚು, ಐರಿಸ್, ಫೋಟೋ) ಸಲ್ಲಿಸಿ.
- ಇದಾದ ನಂತರ URN (ನವೀಕರಣ ವಿನಂತಿ ಸಂಖ್ಯೆ) ಹೊಂದಿರುವ ರಸೀದಿ ಪಡೆಯಿರಿ.
- UIDAI ವೆಬ್ ಸೈಟ್ www.uidai.gov.in ನಲ್ಲಿ URN ಬಳಸಿ ನವೀಕರಣ ಸ್ಥಿತಿಯನ್ನು ಪರಿಶೀಲಿಸಿ.



















