ಪಣಜಿ: ಉತ್ತರ ಗೋವಾದಲ್ಲಿ ಶನಿವಾರ ಪ್ಯಾರಾಗ್ಲೈಡಿಂಗ್ ಅವಘಡವೊಂದು ಸಂಭವಿಸಿದೆ. ಇಲ್ಲಿನ ಕೆರಿ ಗ್ರಾಮದಲ್ಲಿ ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದಾಗಲೇ 27 ವರ್ಷದ ಪ್ರವಾಸಿಗ ಮಹಿಳೆ ಮತ್ತು ಆಕೆಯ ಮಾರ್ಗದರ್ಶಕ ಕಮರಿಯ ಕೊರಕಲು ಪ್ರದೇಶಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಇಬ್ಬರೂ ಸಾವಿಗೀಡಾಗಿದ್ದಾರೆ.
ಮೃತರನ್ನು ಪುಣೆಯ ನಿವಾಸಿ ಶಿವಾನಿ ದಾಬ್ಲೆ ಮತ್ತು ಅವರ ಮಾರ್ಗದರ್ಶಕ ನೇಪಾಳ ಮೂಲದ ಸುಮಲ್ ನೇಪಾಳಿ(26) ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ ಕೇರಿ ಪ್ರಸ್ಥಭೂಮಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಸಾಹಸ ಕ್ರೀಡಾ ಕಂಪನಿಯೊಂದರ ಮೂಲಕ ಶಿವಾನಿ ಅವರು ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದರು. ಬೆಟ್ಟದ ತುದಿಯಿಂದ ಹಾರುತ್ತಿದ್ದಂತೆಯೇ ಇಬ್ಬರು ಕೂಡ ಕಮರಿಗೆ ಬಿದ್ದು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಂಪನಿ ಮಾಲೀಕ ಶೇಖರ್ ರೈಜಾದಾ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.
ಹಿಮಾಚಲದಲ್ಲೂ ಘಟನೆ:
ಇದಕ್ಕೂ 2 ದಿನಗಳ ಹಿಂದಷ್ಟೇ ಹಿಮಾಚಲಪ್ರದೇಶದ ಕಂಗ್ರಾ ಮತ್ತು ಕುಲ್ಲು ಜಿಲ್ಲೆಗಳಲ್ಲಿ 24 ಗಂಟೆಗಳ ಅವಧಿಯಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಪ್ರವಾಸಿಗರು ಮೃತಪಟ್ಟಿದ್ದರು. ಮೃತರು ತಮಿಳುನಾಡು ಹಾಗೂ ಗುಜರಾತ್ ಮೂಲದವರು.