ಟೋಕಿಯೊ: ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ(World Para Championships) 400 ಮೀಟರ್ ಟಿ20 ವಿಭಾಗದಲ್ಲಿ ಭಾರತೀಯ ಆಟಗಾರ್ತಿ ದಾಖಲೆಯ ಚಿನ್ನ ಗೆದ್ದಿದ್ದಾರೆ.
ಜಪಾನ್‌ನ ಕೊಬೆಯಲ್ಲಿ ನಡೆಯುತ್ತಿರುವ ಅಥ್ಲೆಟಿಕ್ಸ್ ನಲ್ಲಿ ಭಾರತದ ದೀಪ್ತಿ ಜೀವನಜಿ (Deepthi Jeevanji) ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. 21 ವರ್ಷದ ಓಟಗಾರ್ತಿ ದೀಪ್ತಿ 55.07 ಸೆಕೆಂಡುಗಳಲ್ಲಿ ಗುರಿ ಮುಟ್ಟುವ ಮೂಲಕ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ.
ಟರ್ಕಿಯ ಐಸೆಲ್ ಒಂಡರ್ ಬೆಳ್ಳಿ, ಈಕ್ವೆಡಾರ್ ನ ಲಿಜಾನ್‌ಶೆಲಾ ಅಂಗುಲೋ ಕಂಚಿನ ಪದಕ ಗೆದ್ದಿದ್ದಾರೆ. ಕಳೆದ ಬಾರಿ ನಡೆದಿದ್ದ ಚಾಂಪಿಯನ್ ಶಿಪ್ ನಲ್ಲಿ ಅಮೆರಿಕದ ಬ್ರೆನ್ನಾ ಕ್ಲಾರ್ಕ್ 55.12 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿ ದಾಖಲೆ ನಿರ್ಮಿಸಿದ್ದರು. ಆದರೆ, ಇಂದು ಈ ದಾಖಲೆಯನ್ನು ಭಾರತೀಯ ಆಟಗಾರ್ತಿ ಮುರಿದಿದ್ದಾರೆ.
ತೆಲಂಗಾಣದ ವಾರಂಗಲ್‌ನ ಜಿಲ್ಲೆಯ ಕಲ್ಲಡಾ ಗ್ರಾಮದ ದೀಪ್ತಿ ಜೀವನಜಿ ಕೂಲಿ ಕಾರ್ಮಿಕ ಕುಟುಂಬದಿಂದ ಬಂದವರು. ಹಿಂದಿನ ವರ್ಷ ನಡೆದಿದ್ದ ಏಷ್ಯನ್ ಪ್ಯಾರಾ ಕ್ರೀಡಾಕೂಟದ ಟಿ20 400 ಮೀಟರ್ ಓಟ ವಿಭಾಗದಲ್ಲಿ 52.69 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದಿದ್ದರು. ದೀಪ್ತಿ, ಎಬಲ್ಡ್ ಬಾಡಿಡ್ ಅಸ್ಟ್ರೀಟ್‌ಗಳೊಂದಿಗೆ ಜೂನಿಯರ್ ಮತ್ತು ಸೀನಿಯರ್ ಚಾಂಪಿಯನ್‌ಶಿಪ್‌ಗಳಲ್ಲಿ ಸ್ಪರ್ಧಿಸಿ, ಹಲವು ಪದಕಗಳನ್ನು ಗೆದ್ದಿದ್ದಾರೆ. ಸದ್ಯದ ಮಾಹಿತಿಯಂತೆ ಭಾರತವು ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1 ಚಿನ್ನ, 1 ಬೆಳ್ಳಿ ಹಾಗೂ 1 ಕಂಚು ಗೆದ್ದಿದೆ.