ಇಸ್ಲಾಮಾಬಾದ್: ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಅಪಹರಣ ಮಾಡಿಸಿದ್ದ ಪಾಕಿಸ್ತಾನದ ಸ್ಕಾಲರ್ ಮುಫ್ತಿ ಶಾ ಮಿರ್ ಎಂಬಾತನನ್ನು ಹತ್ಯೆ ಮಾಡಲಾಗಿದೆ. ಬಲೂಚಿಸ್ತಾನದಲ್ಲಿ ಮುಫ್ತಿ ಶಾ ಮಿರ್ ನನ್ನು ಅನಾಮಧೇಯ ವ್ಯಕ್ತಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದರೊಂದಿಗೆ ಪಾಕಿಸ್ತಾನದಲ್ಲಿ ಉಗ್ರರು, ಧಾರ್ಮಿಕ ಗುರುಗಳು, ಅಪರಾಧ ಕೃತ್ಯಗಳಲ್ಲಿ ತೊಡಗಿರುವವರನ್ನು “ಅನಾಮಧೇಯ” ವ್ಯಕ್ತಿಗಳು ಹತ್ಯೆ ಮಾಡುವ ಸರಣಿ ಮುಂದುವರಿದಿದೆ.
ಕಳೆದ ಶುಕ್ರವಾರ ರಾತ್ರಿ ಬೈಕ್ ಗಳ ಮೇಲೆ ಬಂದ ಅನಾಮಧೇಯ ವ್ಯಕ್ತಿಗಳು ಮುಫ್ತಿ ಶಾ ಮಿರ್ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ತುರ್ಬತ್ ನಲ್ಲಿರುವ ಮಸೀದಿಯಲ್ಲಿ ಮುಫ್ತಿ ಶಾ ಮಿರ್ ಪ್ರಾರ್ಥನೆ ಸಲ್ಲಿಸಿದ ಬಳಿಕ ಹೊರಗೆ ಬಂದು ನಿಂತಿದ್ದ. ಆಗ ಏಕಾಏಕಿ ಅನಾಮಧೇಯ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ.
ಸತತ ಗುಂಡಿನ ದಾಳಿ ಬಳಿಕ ಮುಫ್ತಿ ಶಾ ಮಿರ್ ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಆತನು ಚಿಕಿತ್ಸೆಗೆ ಸ್ಪಂದಿಸಿದೆ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ಮುಫ್ತಿ ಶಾ ಮಿರ್ ಮಾನಹ ಕಳ್ಳಸಾಗಣೆಯಲ್ಲಿ ತೊಡಗಿದ್ದ. ಈತನು ಮೂಲಭೂತವಾದಿ ಪಕ್ಷವಾದ ಉಲೇಮಾ ಎ ಇಸ್ಲಾಮ್ (ಜೆಯುಐ) ಸದಸ್ಯನೂ ಆಗಿದ್ದ. ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ಪರವಾಗಿಯೂ ಈತ ಕೆಲಸ ಮಾಡುತ್ತಿದ್ದ. ಹೆಸರಿಗೆ ಈತ ಸ್ಕಾಲರ್ ಆಗಿದ್ದ ಎಂದು ಹೇಳಲಾಗುತ್ತಿದೆ.
ಕಳೆದ ಒಂದು ವಾರದಲ್ಲಿ ಜೆಯುಐನ ಮೂವರು ಸದಸ್ಯರನ್ನು ಅನಾಮಧೇಯ ವ್ಯಕ್ತಿಗಳು ಕೊಂದಿದ್ದಾರೆ. ಇದಕ್ಕೂ ಮೊದಲು ಇಬ್ಬರು ಸದಸ್ಯರನ್ನು ಹತ್ಯೆ ಮಾಡಲಾಗಿತ್ತು. ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಇರಾನ್ ನಿಂದ ಅಪಹರಣ ಮಾಡಲಾಗಿತ್ತು. ಅಪಹರಣದ ಹಿಂದೆ ಮುಫ್ತಿ ಶಾ ಮಿರ್ ಕೈವಾಡವಿತ್ತು. ಜಾಧವ್ ಅವರು ಗೂಢಚಾರಿ ಎಂದು ಘೋಷಿಸಿದ್ದ ಪಾಕ್ ಮಿಲಿಟರಿ ನ್ಯಾಯಾಲಯವು ಗಲ್ಲುಶಿಕ್ಷೆ ವಿಧಿಸಿತ್ತು. ಆದರೆ, ಭಾರತ ಸರ್ಕಾರವು ಪ್ರಕರಣವು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಿ, ಸಮರ್ಥ ವಾದ ಮಂಡಿಸಿದ ಕಾರಣ, ಜಾಧವ್ ಅವರಿಗೆ ವಿಧಿಸಿದ್ದ ಗಲ್ಲುಶಿಕ್ಷೆಗೆ 2019ರಲ್ಲಿ ತಡೆಯಾಜ್ಞೆ ನೀಡಲಾಗಿದೆ.