ನವದೆಹಲಿ: 27 ಪ್ರವಾಸಿಗರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನಕ್ಕೆ ನಡುಕ ಶುರುವಾಗಿದೆ. ಭಾರತವು ಯಾವುದೇ ಕ್ಷಣದಲ್ಲಿ ತನ್ನ ಮೇಲೆ ದಾಳಿ(India vs Pakistan) ನಡೆಸಬಹುದು ಎಂಬ ಆತಂಕದಲ್ಲಿರುವ ಪಾಕಿಸ್ತಾನವು, ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ಮಿಲಿಟರಿ ಸಹಾಯವನ್ನು ಕೋರಿ ತನ್ನ ಮಿತ್ರರಾಷ್ಟ್ರಗಳನ್ನು ಸಂಪರ್ಕಿಸಿದೆ. ಭಯೋತ್ಪಾದಕ ದಾಳಿಯ ಬಗ್ಗೆ ಮಧ್ಯಸ್ಥಿಕೆ ವಹಿಸಲು ಮತ್ತು ಅಂತರಾಷ್ಟ್ರೀಯ ತನಿಖೆಗೆ ಆಗ್ರಹಿಸಿ ಈಗಾಗಲೇ ಪಾಕಿಸ್ತಾನವು ಚೀನಾ ಮತ್ತು ರಷ್ಯಾವನ್ನು ಸಂಪರ್ಕಿಸಿದೆ ಎಂದು ಮೂಲಗಳು ತಿಳಿಸಿವೆ.
ಇದರ ನಡುವೆಯೇ ಮಿತ್ರರಾಷ್ಟ್ರಗಳಾದ ಟರ್ಕಿ ಮತ್ತು ಚೀನಾವು ಪಾಕಿಸ್ತಾನಕ್ಕೆ ಸೇನಾ ನೆರವನ್ನು ಕಳುಹಿಸಲಾರಂಭಿಸಿವೆ ಎಂದು ವರದಿಗಳು ಹೇಳಿವೆ. ಟರ್ಕಿಯು ಭಾನುವಾರವೇ 6 ಹರ್ಕ್ಯುಲಸ್ ಸಿ 130 ವಿಮಾನಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿದೆ. ಸಿ -130 ಹರ್ಕ್ಯುಲಸ್ ಪ್ರಾಥಮಿಕವಾಗಿ ಏರ್‌ಲಿಫ್ಟ್ ಕಾರ್ಯಾಚರಣೆಗೆ ಬಳಕೆಯಾಗುತ್ತದೆ. ಇದು ಶಸ್ತ್ರಾಸ್ತ್ರಗಳು ಮತ್ತು ಸೈನಿಕರನ್ನು ಏರ್ಲಿಫ್ಟ್ ಮಾಡುವುದು, ಹವಾಮಾನ ಬೇಹುಗಾರಿಕೆ, ವೈಮಾನಿಕ ಸ್ಪ್ರೇ ಕಾರ್ಯಾಚರಣೆಗಳು ಮತ್ತು ಅಗ್ನಿಶಾಮಕ ಕರ್ತವ್ಯಗಳನ್ನೂ ನಿಭಾಯಿಸುತ್ತದೆ. ಈ ವಿಮಾನಗಳು ಪಾಕಿಸ್ತಾನ ಸೇನೆಗೆ ನೆರವಾಗುವಂಥ ಕೆಲವೊಂದು ಮಿಲಿಟರಿ ಶಸ್ತ್ರಾಸ್ತ್ರಗಳನ್ನು ತಂದಿವೆ ಎಂದು ಊಹಿಸಲಾಗಿದೆ.

ಮತ್ತೊಂದೆಡೆ, ಚೀನಾ ಕೂಡ ಪಾಕಿಸ್ತಾನಕ್ಕೆ ಪಿಎಲ್ -15 ಕ್ಷಿಪಣಿಗಳನ್ನು ರವಾನಿಸಿದೆ ಎಂದು ವರದಿಯಾಗಿದೆ. ಈ ಕ್ಷಿಪಣಿಗಳನ್ನು ಜೆಎಫ್ -17 ಫೈಟರ್ ಜೆಟ್ ಗಳಲ್ಲಿ ನಿಯೋಜಿಸಲಾಗಿದೆ. ಪಾಕಿಸ್ತಾನ ವಾಯುಪಡೆ (ಪಿಎಎಫ್) ತನ್ನ ಹೊಸ ಜೆಎಫ್ -17 ಬ್ಲಾಕ್ 3 ಯುದ್ಧ ವಿಮಾನಗಳ ಚಿತ್ರಗಳನ್ನೂ ಅನಾವರಣಗೊಳಿಸಿದೆ. ಇದರಲ್ಲಿ ಪಿಎಲ್ -15 ಬಿಯಾಂಡ್ ವಿಷುಯಲ್ ರೇಂಜ್ (ಬಿವಿಆರ್) ಏರ್-ಟು-ಏರ್ ಕ್ಷಿಪಣಿಗಳನ್ನು ಡ್ಯುಯಲ್ ರಾಕ್ ಗಳನ್ನು ಅಳವಡಿಸಿರುವುದನ್ನು ಕಾಣಬಹುದು.
ಪಿಎಲ್ -15 ಎನ್ನುವುದು ಸಕ್ರಿಯ ರಾಡಾರ್ ನಿಂದ ನಿರ್ದೇಶಿಸಲ್ಪಟ್ಟ ದೀರ್ಘ-ಶ್ರೇಣಿಯ ಕ್ಷಿಪಣಿ (ಎಎಎಂ) ಯಾಗಿದೆ. ಅಸಾಧಾರಣ ತಂತ್ರಗಾರಿಕೆಯೊಂದಿಗೆ ಹೆಚ್ಚಿನ ವೇಗವನ್ನು ಬೆರೆಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು 200ರಿಂದ 300 ಕಿಲೋಮೀಟರ್ (ಸರಿಸುಮಾರು 120 ರಿಂದ 190 ಮೈಲಿಗಳು) ನಡುವೆ ಕಾರ್ಯಾಚರಣೆಯ ವ್ಯಾಪ್ತಿಯನ್ನು ಹೊಂದಿದೆ. ಮ್ಯಾಕ್ 5 ಕ್ಕಿಂತ ಹೆಚ್ಚಿನ ಗರಿಷ್ಠ ವೇಗವನ್ನು ತಲುಪುವ ಸಾಮರ್ಥ್ಯವನ್ನೂ ಹೊಂದಿದೆ ಎಂದು ವರದಿಗಳು ಹೇಳಿವೆ.
ಪಾಕಿಸ್ತಾನಕ್ಕೆ ಪಿಎಲ್ -15, ಸಿ 130ನಿಂದ ಅನುಕೂಲವೇನು?
ಪಿಎಲ್ -15 ನ ವರ್ಧಿತ ಶ್ರೇಣಿಯು ಪಾಕಿಸ್ತಾನದ ಪೈಲಟ್ ಗಳಿಗೆ ಭಾರತೀಯ ವೈಮಾನಿಕ ದಾಳಿಯನ್ನು ಎದುರಿಸಲು ಅನುವು ಮಾಡಿಕೊಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಸಂಘರ್ಷದ ಸನ್ನಿವೇಶಗಳಲ್ಲಿ ಇದು ಪಾಕ್ ಸೇನೆಗೆ ನೆರವಾಗಲಿದೆ. ಮತ್ತೊಂದೆಡೆ, ಹರ್ಕ್ಯುಲಸ್ ಸಿ 130 ಪಾಕಿಸ್ತಾನಕ್ಕೆ ಸೈನಿಕರ ಕ್ಷಿಪ್ರ ಚಲನವಲನ ಕೈಗೊಳ್ಳಲು ಮತ್ತು ಮದ್ದುಗುಂಡುಗಳನ್ನು ನಿಯೋಜಿಸಲು ಸಹಾಯ ಮಾಡುತ್ತದೆ.
ಇದಕ್ಕೆ ಪ್ರತಿಯಾಗಿ ಭಾರತದ ಬಳಿ ಏನಿದೆ?
ಪಾಕಿಸ್ತಾನದ ಪಿಎಲ್ -15 ಕ್ಷಿಪಣಿಗಳು ಭಾರತಕ್ಕೆ ಬೆದರಿಕೆ ತಂದೊಡ್ಡಬಹುದಾದರೂ, ಭಾರತದ ಬಳಿಯಿರುವ ಮಿಟಿಯೋರ್ ಕ್ಷಿಪಣಿಗಳನ್ನೊಳಗೊಂಡ ರಫೇಲ್ ಯುದ್ಧ ವಿಮಾನಗಳು ಪಾಕಿಸ್ತಾನಕ್ಕೆ ಬಲಿಷ್ಠ ತಿರುಗೇಟು ನೀಡಲು ಸಹಾಯ ಮಾಡಲಿದೆ. ಇದಲ್ಲದೆ, ಭಾರತವು ಅನೇಕ ಕ್ಷಿಪಣಿಗಳು ಮತ್ತು ಕ್ಷಿಪಣಿ ನಿಗ್ರಹ/ಜೆಟ್ ವ್ಯವಸ್ಥೆಗಳನ್ನು ಹೊಂದಿದೆ. ಅವುಗಳಿಗೆ ಪಾಕಿಸ್ತಾನವು ಸರಿಸಾಟಿಯೇ ಅಲ್ಲ. ಉದ್ವಿಗ್ನತೆ ಉಂಟಾದರೂ ಬಲಿಷ್ಠ ರಕ್ಷಣಾ ವ್ಯವಸ್ಥೆಯಲ್ಲಿ ಪಾಕಿಸ್ತಾನದಕ್ಕಿಂತ ಭಾರತವೇ ಹೆಚ್ಚಿನ ಮೇಲುಗೈ ಕಾಯ್ದುಕೊಂಡಿದೆ.